ಬೆಂಗಳೂರು : ಕಳೆದ ಕೆಲ ತಿಂಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಕಳೆದ 10 ದಿನಗಳಿಂದ ಸತತ ಏರಿಕೆ ಕಾಣುತ್ತಿದೆ. ಕಳೆದ 10 ದಿನಗಳಲ್ಲಿಯೇ 10 ಗ್ರಾಂ ಚಿನ್ನದ ಬೆಲೆಯಲ್ಲಿ (Gold Rate Today) ಸುಮಾರು 10 ಸಾವಿರ ರೂಪಾಯಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಭಾರಿ ಹೊರೆಯಾಗುತ್ತದೆ. ಗುರುವಾರ (ಆಗಸ್ಟ್ 13) ಕೂಡ ಹಳದಿ ಲೋಹದ ದರದಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಮತ್ತಷ್ಟು ಆತಂಕಕ್ಕೆ ಸಿಲುಕುವಂತಾಗಿದೆ.
ಗುರುವಾರ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ ಅಪರಂಜಿ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ ಇಂದು 15,513 ರೂಪಾಯಿ ಆಗಿದೆ. ಇನ್ನು, 22 ಕ್ಯಾರೆಟ್ ನ 1 ಗ್ರಾಂ ಬಂಗಾರದ ಧಾರಣೆಯಲ್ಲಿ 25 ರೂಪಾಯಿ ಏರಿಕೆಯಾಗಿದೆ. ಆ ಮೂಲಕ 1 ಗ್ರಾಂ ಚಿನ್ನದ ದರವು 14,220 ರೂಪಾಯಿ ಆಗಿದೆ. ಇದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
10 ದಿನದಲ್ಲಿ ಭಾರಿ ಏರಿಕೆ
ಕಳೆದ 10 ದಿನಗಳಲ್ಲಿಯೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. 10 ದಿನಗಳ ಹಿಂದೆ ಅಪರಂಜಿ ಚಿನ್ನವು 1 ಗ್ರಾಂಗೆ 14,400 ರೂ. ಇತ್ತು. 22 ಕ್ಯಾರೆಟ್ ಬಂಗಾರದ ಬೆಲೆಯು 13,200 ರೂಪಾಯಿ ಇತ್ತು. ಆದರೀಗ, 10 ಸಾವಿರ ರೂಪಾಯಿ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಚಿನ್ನದ ಧಾರಣೆಯು 7 ಬಾರಿ ಏರಿಕೆ ಕಂಡಿದೆ. 2 ಬಾರಿ ಇಳಿಕೆಯಾದರೆ, ಒಮ್ಮೆ ಮಾತ್ರ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ.
ಬೆಳ್ಳಿಯ ಬೆಲೆಯಲ್ಲಿ ಸ್ಥಿರತೆ
ಗುರುವಾರ ಬೆಳ್ಳಿಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೆಂಗಳೂರಿನಲ್ಲಿ ಇಂದು 1 ಕೆ.ಜಿ ಬೆಳ್ಳಿಯ ದರವು 2.55 ಲಕ್ಷ ರೂಪಾಯಿ ಆಗಿದೆ. ಬುಧವಾರ ಒಂದೇ ದಿನ 1 ಕೆ.ಜಿ ಬೆಳ್ಳಿಯ ಧಾರಣೆಯಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿ ಏರಿಕೆಯಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಯೇರಿಕೆಯಾಗಿರುವ ಕಾರಣ ದೇಶದಲ್ಲೂ ಚಿನ್ನ ಹಾಗೂ ಬೆಳ್ಳಿಯ ದರ ಜಾಸ್ತಿಯಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ : 2025ರ ಕೆಂಪುಕೋಟೆ ಸ್ಫೋಟದ ಹಿಂದೆ ಅಲ್‌ಖೈದಾ ಕೈವಾಡ : ವಿಶ್ವಸಂಸ್ಥೆ ವರದಿ



















