ನವದೆಹಲಿ : ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಕರ್ತವ್ಯ ನಿರತ ದೆಹಲಿ ಪೋಲಿಸರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಗಾಯಾಳು ಪೊಲೀಸರ ಕುಟುಂಬಸ್ಥರು ಇದೀಗ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕವಾಗಿ ಪೊಲೀಸರನ್ನೇ ಅಪರಾಧಿಗಳಂತೆ ಬಿಂಬಿಸಲಾಗುತ್ತಿದ್ದು, ಇದು ಏಕಪಕ್ಷೀಯ ಮತ್ತು ಸತ್ಯಕ್ಕೆ ದೂರವಾದ ನಿರೂಪಣೆ ಎಂದು ಅವರು ದೂರಿದ್ದಾರೆ.
ಪ್ರತಿಭಟನೆಯಲ್ಲಿ ಪೊಲೀಸರು ಎದುರಿಸಿದ ಭೀಕರ ಪರಿಸ್ಥಿತಿಯನ್ನು ವಿವರಿಸಿದ ಅಧಿಕಾರಿಯೊಬ್ಬರ ಪತ್ನಿ, “ಖಾಕಿ ಸಮವಸ್ತ್ರದ ಹಿಂದೆ ಬರೀ ಒಬ್ಬ ಪೊಲೀಸ್ ಮಾತ್ರ ಇರುವುದಿಲ್ಲ, ಅವರನ್ನೇ ನೆಚ್ಚಿಕೊಂಡಿರುವ ತಂದೆ, ತಾಯಿ, ಪತ್ನಿ ಮತ್ತು ಮಕ್ಕಳ ಕುಟುಂಬವಿರುತ್ತದೆ. ಪ್ರತಿಯೊಬ್ಬರೂ ಅವರು ಮನೆಗೆ ಸುರಕ್ಷಿತವಾಗಿ ಹಿಂತಿರುಗಲಿ ಎಂದು ರಾತ್ರಿಯಿಡೀ ಕಾಯುತ್ತಿರುತ್ತಾರೆ” ಎಂದು ಕಣ್ಣೀರಿಟ್ಟರು.
ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಪುತ್ರ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕುಂಜಾಲ್ ಮಾತನಾಡಿ, “ಆರಂಭದಲ್ಲಿ ಇದು ವಿದ್ಯಾರ್ಥಿ ಚಳವಳಿಯಂತೆ ಕಂಡರೂ, ನಂತರ ಹಲವು ಸಮಾಜಘಾತುಕ ಶಕ್ತಿಗಳು ಇದರಲ್ಲಿ ನುಸುಳಿದ್ದವು. ಜುಲೈ 25ರಂದು ನನ್ನ ತಂದೆಯನ್ನು ಗುಂಪೊಂದು ಎಳೆದಾಡಿ ಕೊಲೆಗೆ ಯತ್ನಿಸಿತು. ಅವರು ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳ ಕಾಲ ಪ್ರಜ್ಞಾಹೀನರಾಗಿದ್ದರು. ರಾತ್ರಿ ಮನೆಗೆ ಬಂದಾಗ ಅವರ ಸಮವಸ್ತ್ರ ಪೂರ್ತಿ ರಕ್ತಸಿಕ್ತವಾಗಿತ್ತು. ತಲೆಗೆ ನಾಲ್ಕು ಹೊಲಿಗೆ ಬಿದ್ದಿದ್ದರೂ, ಮಗನಿಗೆ ಧೈರ್ಯ ಹೇಳಲು ‘ಸಣ್ಣ ಗಾಯ’ ಎಂದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತಂದೆಯನ್ನು ಅಪರಾಧಿಯಂತೆ ಬಿಂಬಿಸುತ್ತಿರುವುದು ನಮಗೆ ತೀವ್ರ ನೋವು ತಂದಿದೆ” ಎಂದು ಅಳಲು ತೋಡಿಕೊಂಡರು.
ಹೆಲ್ಮೆಟ್ ಚೂರುಚೂರು, ಸುಳ್ಳು ವರದಿಗಳ ವಿರುದ್ಧ ಆಕ್ರೋಶ
ಮತ್ತೊಬ್ಬ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಅವರ ಪತ್ನಿ ಸೀಮಾ ಮಾತನಾಡಿ, “ನನ್ನ ಪತಿ 33 ವರ್ಷಗಳಿಂದ ಸೇವೆಯಲ್ಲಿದ್ದಾರೆ. ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆಯಲ್ಲಿ ಹಠಾತ್ತಾಗಿ ಉಗ್ರ ರೂಪ ತಾಳಿದ ಗುಂಪು ಪೊಲೀಸರ ಮೇಲೆ ಹೂವಿನ ಕುಂಡಗಳು, ಕಲ್ಲುಗಳು ಹಾಗೂ ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ಮಾಡಿತು.
ನನ್ನ ಪತಿಯ ಹೆಲ್ಮೆಟ್ ಸಂಪೂರ್ಣವಾಗಿ ಚೂರುಚೂರಾಗಿದೆ. ಒಂದು ವೇಳೆ ಆ ಕಲ್ಲು ತಲೆಗೆ ನೇರವಾಗಿ ಬಿದ್ದಿದ್ದರೆ ಜೀವಕ್ಕೇ ಅಪಾಯವಾಗುತ್ತಿತ್ತು. ರಾಜಕಾರಣಿಗಳು ಮತ್ತು ಮಾಧ್ಯಮಗಳು ಪೊಲೀಸರು ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಹೊಡೆದಿದ್ದಾರೆ ಎಂಬ ಒಂದೇ ಮಜಲಿನ ಕಥೆಯನ್ನು ಹರಡುತ್ತಿವೆ. ಆದರೆ ನೈಜತೆಯೇ ಬೇರೆಯಾಗಿದೆ, ಸಂಸತ್ತಿನಲ್ಲಿ ನಮ್ಮ ಬಗ್ಗೆಯೂ ಧ್ವನಿ ಎತ್ತಬೇಕಿದೆ” ಎಂದು ಮನವಿ ಮಾಡಿದರು.
ಶೌರ್ಯ ಪ್ರಶಸ್ತಿ ವಿಜೇತ ಅಸಿಸ್ಟೆಂಟ್ ಕಮಿಷನರ್ ಅವರ ಪುತ್ರ ಲಕ್ಷ್ಯ ಸಿಂಗ್ ಬಿಷ್ಟ್ ಮಾತನಾಡಿ, “ತಂದೆಯ ತಲೆಗೆ ಹೊಲಿಗೆ ಹಾಕಿರುವ ಫೋಟೋ ನೋಡಿ ಆತಂಕವಾಯಿತು. ಪ್ರತಿಭಟನೆಯ ಹೆಸರಿನಲ್ಲಿ ಅಲ್ಲಿಗೆ ಬಂದಿದ್ದ ಗೂಂಡಾಗಳು ಹಿಂಸಾಚಾರ ನಡೆಸಲು ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕುಂದಾಪುರ ಫೈರಿಂಗ್ ಕೇಸ್ : ಐವನ್ ಹತ್ಯೆ ಆರೋಪಿ ಡೆರಿಕ್‌ಗಾಗಿ 3 ವಿಶೇಷ ತಂಡಗಳಿಂದ ಶೋಧ!



















