ನವದೆಹಲಿ : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕರನ್ನು ಬಲಿಪಡೆದ ಭೀಕರ ಭಯೋತ್ಪಾದನಾ ದಾಳಿ ನಡೆದು ಇಂದಿಗೆ ಒಂದು ವರ್ಷ ತುಂಬಿದೆ. ಈ ಕರಾಳ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಯಲ್ಲಿ ಮೃತಪಟ್ಟ 26 ಅಮಾಯಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ಸಂತ್ರಸ್ತರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಮತ್ತು ಭಾರತವು ಯಾವುದೇ ರೂಪದ ಭಯೋತ್ಪಾದನೆಗೆ ತಲೆಬಾಗುವುದಿಲ್ಲ” ಎಂದು ಹೇಳಿದ್ದಾರೆ.
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ 25 ಪ್ರವಾಸಿಗರು ಹಾಗೂ ಓರ್ವ ಸ್ಥಳೀಯ ಕುದುರೆ ಸವಾರ ಸೇರಿದಂತೆ ಒಟ್ಟು 26 ಮಂದಿ ಬಲಿಯಾಗಿದ್ದರು. “ಈ ಭೀಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ನೆನಪು ನಮ್ಮನ್ನು ಸದಾ ಕಾಡುತ್ತದೆ. ದುಃಖತಪ್ತ ಕುಟುಂಬಗಳ ನೋವಿನಲ್ಲಿ ದೇಶವು ಜೊತೆಯಾಗಿ ನಿಂತಿದೆ. ಭಯೋತ್ಪಾದಕರ ಹೇಯ ಸಂಚುಗಳು ಎಂದಿಗೂ ಯಶಸ್ವಿಯಾಗಲು ನಾವು ಬಿಡುವುದಿಲ್ಲ,” ಎಂದು ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಧರ್ಮದ ಆಧಾರದ ಮೇಲೆ ಜನರನ್ನು ಬೇರ್ಪಡಿಸಿ ಪ್ರಾಣ ತೆಗೆದ ಉಗ್ರರ ಈ ಕೃತ್ಯ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿತ್ತು.
‘ಆಪರೇಷನ್ ಸಿಂದೂರ’ ಮೂಲಕ ದಿಟ್ಟ ಪ್ರತ್ಯುತ್ತರ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು 2025ರ ಮೇ 7ರಂದು ‘ಆಪರೇಷನ್ ಸಿಂದೂರ’ ಎಂಬ ಬೃಹತ್ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗಳ 9 ಪ್ರಮುಖ ಲಾಂಚ್ ಪ್ಯಾಡ್‌ಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ನಂತರ ಮೇ 10ರಂದು ಪಾಕಿಸ್ತಾನದ ವಿನಂತಿಯ ಮೇರೆಗೆ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಗಿತ್ತು.
ನ್ಯಾಯ ಒದಗಿಸಿದ ‘ಆಪರೇಷನ್ ಮಹದೇವ್’
ದಾಳಿ ನಡೆದ ನಂತರ ತಪ್ಪಿಸಿಕೊಂಡಿದ್ದ ಮೂವರು ಪ್ರಮುಖ ಭಯೋತ್ಪಾದಕರನ್ನು ಭಾರತೀಯ ಸೇನೆಯು ಅಟ್ಟಾಡಿಸಿತ್ತು. ‘ಆಪರೇಷನ್ ಮಹದೇವ್’ ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ ಆ ಮೂವರನ್ನೂ ಸದೆಬಡಿಯುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಸೇನೆ, “ಮಾನವೀಯತೆಯ ಗಡಿ ದಾಟಿದಾಗ ನಮ್ಮ ಪ್ರತಿಕ್ರಿಯೆ ನಿರ್ಣಾಯಕವಾಗಿರುತ್ತದೆ. ಭಾರತದ ವಿರುದ್ಧದ ಕೃತ್ಯಗಳಿಗೆ ನ್ಯಾಯ ಸಲ್ಲಿಕೆಯಾಗುವುದು ಖಚಿತ,” ಎಂದು ಎಚ್ಚರಿಕೆ ನೀಡಿದೆ.
ಪಹಲ್ಗಾಮ್‌ನಲ್ಲಿ ಕಪ್ಪು ಅಮೃತಶಿಲೆಯ ಸ್ಮಾರಕ
ಸಂತ್ರಸ್ತರ ನೆನಪಿಗಾಗಿ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಲಿಡ್ಡರ್ ನದಿಯ ದಡದಲ್ಲಿ ಕಪ್ಪು ಅಮೃತಶಿಲೆಯ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಸ್ಮಾರಕದಲ್ಲಿ ದಾಳಿಗೆ ಬಲಿಯಾದ 26 ಜನರ ಹೆಸರುಗಳನ್ನು ಕೆತ್ತಲಾಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಅಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಇಂದು ನಡೆಯಲಿರುವ ಪುಣ್ಯಸ್ಮರಣೆ ಕಾರ್ಯಕ್ರಮಕ್ಕಾಗಿ ಪಹಲ್ಗಾಮ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ತಮಿಳುನಾಡು ಚುನಾವಣೆ : ಬೆಂಗಳೂರಿನಿಂದ ಊರಿಗೆ ಮತದಾರರ ದಂಡು.. ಬಸ್‌ಗಳು ಫುಲ್!



















