ಬೆಂಗಳೂರು : ಇರಾನ್-ಅಮೆರಿಕ ನಡುವೆ ಸಂಘರ್ಷ ಮುಂದುವರಿದಿರುವ ಕಾರಣ ಹರ್ಮುಜ್ ಜಲಸಂಧಿಯು ಸ್ಥಗಿತಗೊಂಡಿದೆ. ಇದರಿಂದಾಗಿ ಭಾರತಕ್ಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಜನರಿಗೆ ಎಲ್‌ಪಿಜಿ ಸಿಲಿಂಡರ್ ಕೊರತೆಯಾಗಿದೆ. ಹಾಗೆಯೇ, ಕಾಳ ಸಂತೆಯಲ್ಲಿ ಬೇಕಾಬಿಟ್ಟಿ ಬೆಲೆಗೆ ಎಲ್ ಪಿಜಿ ಸಿಲಿಂಡರ್ ಮಾರಾಟವೂ ನಡೆಯುತ್ತಿದೆ. ಇದನ್ನು ಮನಗಂಡು ತೈಲ ಕಂಪನಿಗಳು ಗ್ರಾಹಕರಿಗೆ ಈಗ ಹೊಸ ಮಾರ್ಗಸೂಚಿ ಹೊರಡಿಸಿವೆ. ಜೂನ್ 30ರೊಳಗೆ ಪ್ರತಿಯೊಬ್ಬ ಗ್ರಾಹಕರು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆದೇಶ ಹೊರಡಿಸಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಗ್ರಾಹಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. LPG ಸಬ್ಸಿಡಿಯ ಪ್ರಯೋಜನಗಳನ್ನು ಮುಂದುವರಿಸಲು ಜೂನ್ 30ರೊಳಗೆ ಇ-ಕೆವೈಸಿಯನ್ನು ಪೂರ್ಣಗೊಳಿಸುವುದು ಕಡ್ಡಾಯ ಎಂದು ಸೂಚನೆ ನೀಡಿದೆ. ಹಾಗಾಗಿ, ಎಲ್ ಪಿಜಿ ಗ್ರಾಹಕರು ಆಧಾರ್-ಬಯೋಮೆಟ್ರಿಕ್ ದೃಢೀಕರಣ ಅಥವಾ ಇ-ಕೆವೈಸಿ ಪೂರ್ಣಗೊಳಿಸುವುದು ಪ್ರಮುಖ ಸಂಗತಿಯಾಗಿದೆ.
ಇ-ಕೆವೈಸಿ ಮಾಡದವರಿಗೆ ಮಾತ್ರ ಹೊಸ ನಿಯಮ ಅನ್ವಯವಾಗುತ್ತದೆ. ನೀವು ಪಿಎಂಯುವೈ ಗ್ರಾಹಕರಲ್ಲದಿದ್ದರೆ ಮತ್ತು ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿದ್ದರೆ, ಎಲ್ ಪಿಜಿ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಮತ್ತೆ ಮಾಡುವ ಅಗತ್ಯವಿಲ್ಲ ಎಂದು ಕೂಡ ಕಂಪನಿಗಳು ತಿಳಿಸಿವೆ. ಗ್ರಾಹಕರಿಗೆ ಪಾರದರ್ಶಕವಾಗಿ ಸಿಲಿಂಡರ್ ಗಳು ಪೂರೈಕೆಯಾಗಬೇಕು. ಅಕ್ರಮವಾಗಿ ಬೇರೊಬ್ಬರಿಗೆ ಮಾರಾಟವಾಗಬಾರದು ಎಂಬ ದೃಷ್ಟಿಯಿಂದ ಹೊಸ ಮಾರ್ಗಸೂಚಿ ಹೊರಡಿಸಿವೆ.
ಇ-ಕೆವೈಸಿ ಮಾಡಿಸುವುದು ಹೇಗೆ?
ಎಲ್‌ಪಿಜಿ ಗ್ರಾಹಕರು ಸುಲಭವಾಗಿ, ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಿಸಬಹುದಾಗಿದೆ. ಎಚ್.ಪಿ ಗ್ಯಾಸ್, ಇಂಡೇನ್ ಗ್ಯಾಸ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಗಳ ಅಧಿಕೃತ ಆ್ಯಪ್ ಗಳು ಅಥವಾ ವೆಬ್ ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ಆನ್ ಲೈನ್ ನಲ್ಲೇ ಇ-ಕೆವೈಸಿ ಮಾಡಿಸಬಹುದು. ಇನ್ನು, ನಿಮಗೆ ಹತ್ತಿರವಿರುವ ಗ್ಯಾಸ್ ಏಜೆನ್ಸಿಗಳನ್ನು ಸಂಪರ್ಕಿಸುವ ಮೂಲಕವೂ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಇದನ್ನೂ ಓದಿ : ಹೊರ್ಮುಜ್ ಜಲಸಂಧಿ ಮುಕ್ತಕ್ಕೆ ಅಮೆರಿಕ-ಇರಾನ್ ಸಮ್ಮತಿ ; ಆದ್ರೆ ತಕ್ಷಣಕ್ಕೆ ಮುಗಿಯಲ್ಲ ಆರ್ಥಿಕ ಸಂಕಷ್ಟ!


















