ಹೈದರಾಬಾದ್: ಹೈದರಾಬಾದ್‌ನ ಹೊರವರ್ತುಲ ರಸ್ತೆಯಲ್ಲಿ (ORR) ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ತೆಲುಗು ನಟ ಕೆ. ಭರತ್ ಕಾಂತ್ (31) ಹಾಗೂ ಅವರ ಸ್ನೇಹಿತ ಜಿ. ಸಾಯಿ ತ್ರಿಲೋಕ್ (31) ದುರ್ಮರಣಕ್ಕೀಡಾಗಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಮೂಲದವರಾದ ಇವರಿಬ್ಬರೂ ಅಪಘಾತದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಆಗಿದ್ದೇನು?
ಆದಿಭಟ್ಲ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಈ ಇಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಚಲಾಯಿಸುತ್ತಿದ್ದ ನಟ ಭರತ್ ಕಾಂತ್ ಅವರು ಹಠಾತ್ತನೆ ನಿಯಂತ್ರಣ ಕಳೆದುಕೊಂಡ ಪರಿಣಾಮ, ಮುಂದೆ ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಕಂಟೇನರ್ ಲಾರಿಯ ಹಿಂದಿನ ಚಕ್ರಗಳೇ ಕಳಚಿಕೊಂಡಿವೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಭರತ್ ಹಾಗೂ ಸಾಯಿ ತ್ರಿಲೋಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ಪ್ರಕರಣ ದಾಖಲು
ಅಪಘಾತದ ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ದುರ್ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಡಿಜಿಟಲ್ ಲೋಕದಲ್ಲಿ ಮಿಂಚಿದ್ದ ಯುವ ಪ್ರತಿಭೆ
31 ವರ್ಷದ ಭರತ್ ಕಾಂತ್ ಅವರು ತೆಲುಗು ಡಿಜಿಟಲ್ ವಲಯದಲ್ಲಿ ಡ್ಯಾನ್ಸರ್, ಕಂಟೆಂಟ್ ಕ್ರಿಯೇಟರ್ ಹಾಗೂ ನಟನಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ‘ಟೆನೆಂಟ್’ (Tenant) ಮತ್ತು ‘ಗ್ರಾಮಂ’ (Gramam) ಸೇರಿದಂತೆ ಕೆಲವು ತೆಲುಗು ಸಿನಿಮಾಗಳು ಹಾಗೂ ಕಿರುಚಿತ್ರಗಳಲ್ಲಿ ಅವರು ನಟಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದ ಅವರು ಯುವ ಸಮುದಾಯದಲ್ಲಿ ಉತ್ತಮ ಫಾಲೋಯಿಂಗ್ ಹೊಂದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ 40ಸಾವಿರಕ್ಕೂ ಅಧಿಕ ಹಾಗೂ ಯೂಟ್ಯೂಬ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅವರನ್ನು ಹಿಂಬಾಲಿಸುತ್ತಿದ್ದರು.
ವೈರಲ್ ಆಗುತ್ತಿರುವ ಕೊನೆಯ ಪೋಸ್ಟ್
ನಟನ ಅಕಾಲಿಕ ನಿಧನದ ವರದಿಗಳು ಹೊರಬೀಳುತ್ತಿದ್ದಂತೆಯೇ, ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಕೊನೆಯ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿರುವ ಮಾಲ್ ಒಂದರಲ್ಲಿ ತೆಗೆದಿದ್ದ ವಿಡಿಯೋವನ್ನು ಹಂಚಿಕೊಂಡಿದ್ದ ಅವರು, ಅದಕ್ಕೆ ತಮಿಳಿನಲ್ಲಿ “ನಾನ್ ಇತ ಸೊಲ್ಲಿಯೇ ಆಗನುಂ, ನೀ ಅವ್ವಳವು ಅಳಗು” (ನಾನು ಇದನ್ನು ಹೇಳಿಯೇ ತೀರಬೇಕು, ನೀನು ಅಷ್ಟು ಸುಂದರ) ಎಂದು ಬರೆದುಕೊಂಡಿದ್ದರು. ಯುವ ಪ್ರತಿಭೆಯ ಈ ಹಠಾತ್ ಅಗಲಿಕೆಗೆ ಅಭಿಮಾನಿಗಳು ಹಾಗೂ ಡಿಜಿಟಲ್ ಲೋಕದ ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ.



















