ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವ ಆರೋಪ ಕೇಳಿಬಂದಿದೆ. SIR ಪ್ರಕ್ರಿಯೆಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರನ್ನು ASDDO ಪಟ್ಟಿಗೆ ಸೇರಿಸಲಾಗಿದೆ ಎಂದು ಅವರೇ ಆರೋಪಿಸಿದ್ದಾರೆ. ಈ ಬಗ್ಗೆ Xನಲ್ಲಿ ವೀಡಿಯೋ ಹಂಚಿಕೊಂಡಿರುವ ಪ್ರಕಾಶ್ ರಾಜ್, ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.
“ಬೆಂಗಳೂರಿನಲ್ಲಿ 65 ಲಕ್ಷಕ್ಕೂ ಅಧಿಕ ಮತಗಳನ್ನು ಡಿಲೀಟ್ ಮಾಡಲಾಗಿದೆ. ಅದರಲ್ಲಿ ನನ್ನ ಮತವೂ ಒಂದು” ಎಂದು ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. ವಿಪರ್ಯಾಸವೆಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸಂಸದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದು, ಇಲ್ಲೇ ಸ್ಕೂಲ್, ಕಾಲೇಜು ಓದಿದ್ದೇನೆ. ಆದರೂ ನನ್ನನ್ನೇ ವೋಟರ್ ಲಿಸ್ಟ್‌ನಿಂದ ಹೊರಗಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈಗ ನನ್ನ ಬಳಿ ಯಾವ ಕಾಗದ ಕೇಳುತ್ತಾರೆ ಎಂಬುದನ್ನು ಕಾದು ನೋಡೋಣ. SIRನ ಎಲ್ಲಾ ಪ್ರಕ್ರಿಯೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ. ಅಧಿಕಾರ ಬಳಸಿ ನನ್ನ ಹಕ್ಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಬಹುದು. ಆದರೆ ನನ್ನ ಹಕ್ಕನ್ನು ಕಿತ್ತುಕೊಳ್ಳಲು ನಿಮಗೆ ಸಾಧ್ಯವೇ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿ ಕಿಡಿಕಾರಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಈಗಾಗಲೇ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ನಟ ಪ್ರಕಾಶ್ ರಾಜ್ ಅವರ ಹೆಸರು ASDDO ಪಟ್ಟಿಗೆ ಸೇರ್ಪಡೆಯಾಗಿರುವ ಆರೋಪ ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಜಾರ್ಖಂಡ್ ಉದ್ವಿಗ್ನ : ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ಖಂಡಿಸಿ ಬಿಜೆಪಿಯಿಂದ ರಾಜ್ಯವ್ಯಾಪಿ ಬಂದ್!



















