ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ರಾಜಧಾನಿ ಢಾಕಾದಲ್ಲಿ 25 ವರ್ಷದ ಹಿಂದೂ ಅರ್ಚಕ ಹಾಗೂ ಕಾನೂನು ವಿದ್ಯಾರ್ಥಿಯೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿ, ರಾತ್ರಿಯಿಡೀ ಒತ್ತೆ ಇಟ್ಟುಕೊಂಡು ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ಘೋರ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತ ಯುವಕನನ್ನು ಸುಭಾಷ್ ದೇವೂರಿ ಎಂದು ಗುರುತಿಸಲಾಗಿದ್ದು, ಆತನ ಕುಟುಂಬದಿಂದ ಹಣ ಸುಲಿಗೆ ಮಾಡಿದ ನಂತರ ದುಷ್ಕರ್ಮಿಗಳು ಆತನನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಸದ್ಯ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (DMCH) ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಜಗನ್ನಾಥ ವಿವಿ ಮಂದಿರದ ಸಹಅರ್ಚಕ
ಮೂಲತಃ ಮಗುರಾ ಜಿಲ್ಲೆಯ ಶ್ರೀಪುರ್ ಉಪಜಿಲಾದವರಾದ ಸುಭಾಷ್ ದೇವೂರಿ, ಢಾಕಾ ಸೆಂಟ್ರಲ್ ಲಾ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. ಇದರೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಜಗನ್ನಾಥ ವಿಶ್ವವಿದ್ಯಾಲಯದ ಕೇಂದ್ರ ಮಂದಿರದಲ್ಲಿ ಸಹ ಅರ್ಚಕರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದು, ಪ್ರತಿದಿನ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದರು. ಅವರು ಢಾಕಾದ ವಾರಿ ವ್ಯಾಪ್ತಿಯ ನರಿಂದಾ ಪ್ರದೇಶದಲ್ಲಿ ತನ್ನ ಸ್ನೇಹಿತ ದುರ್ಜಯ್ ಸಹಾ ಎಂಬವರೊಂದಿಗೆ ಬಾಡಿಗೆ ಕೋಣೆಯಲ್ಲಿದ್ದರು. ಸೋಮವಾರ ರಾತ್ರಿ ಕಾಲೇಜಿನಿಂದ ಮರಳುವಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಸಂತ್ರಸ್ತ ಸುಭಾಷ್ ಅವರ ಸಹೋದರಿ ಜಯಾ ದೇವೂರಿ ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಸುಭಾಷ್ನನ್ನು ಅಪಹರಿಸಿ, ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡಿದ್ದಾರೆ. “ಮಧ್ಯರಾತ್ರಿ ಸುಮಾರು 2.30ರ ಸುಮಾರಿಗೆ ನನ್ನ ಸಹೋದರ ಅಳುತ್ತಾ ನನಗೆ ಕರೆ ಮಾಡಿದ. ತಕ್ಷಣವೇ ಹಣ ಕಳುಹಿಸಿಕೊಡಿ, ಇಲ್ಲದಿದ್ದರೆ ನನ್ನನ್ನು ಕೊಂದುಹಾಕುವುದಾಗಿ ದುಷ್ಕರ್ಮಿಗಳು ಬೆದರಿಸುತ್ತಿದ್ದಾರೆ ಎಂದು ಕಣ್ಣೀರಿಟ್ಟು ಬೇಡಿಕೊಂಡ” ಎಂದು ಜಯಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಸಹೋದರನನ್ನು ಬಿಡುಗಡೆ ಮಾಡಬೇಕೆಂದರೆ 30,000 ಟಾಕಾ (ಬಾಂಗ್ಲಾದೇಶಿ ಕರೆನ್ಸಿ) ನೀಡುವಂತೆ ಬೇಡಿಕೆ ಇಟ್ಟಿದ್ದ. ತಕ್ಷಣವೇ ಕುಟುಂಬದವರು 26,000 ಟಾಕಾವನ್ನು ದುಷ್ಕರ್ಮಿಗಳು ನೀಡಿದ ನಂಬರ್ಗೆ ವರ್ಗಾಯಿಸಿದ ನಂತರ ಅಪಹರಣಕಾರರ ಸಂಪರ್ಕ ಕಡಿತಗೊಂಡಿತ್ತು ಎಂದಿದ್ದಾರೆ.
ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ಮೇಲ್
ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ನರಿಂದಾ ಪ್ರದೇಶದ ಅಗ್ರಣಿ ಬ್ಯಾಂಕ್ ಎದುರು ಸುಭಾಷ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಆತನ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಗೆ ಸಾಗಿಸುವಾಗ ಸುಭಾಷ್ ತನಗಾದ ಕ್ರೌರ್ಯವನ್ನು ವಿವರಿಸಿದ್ದಾನೆ ಎಂದು ಸುಭಾಷ್ ಅವರ ರೂಮ್ ಮೇಟ್ ದುರ್ಜಯ್ ಸಹಾ ತಿಳಿಸಿದ್ದಾರೆ. ರಾತ್ರಿ 10 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೆ ದುಷ್ಕರ್ಮಿಗಳು ಅವನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದಾರೆ. ಅಷ್ಟೇ ಅಲ್ಲದೆ, ಆತನನ್ನು ಸಂಪೂರ್ಣ ನಗ್ನಗೊಳಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ತಕ್ಷಣ ಹಣ ನೀಡದಿದ್ದರೆ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದೂ ದುರ್ಜಯ್ ಆರೋಪಿಸಿದ್ದಾರೆ.
ತನಿಖೆ ಆರಂಭ
ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪೊಲೀಸ್ ಔಟ್ಪೋಸ್ಟ್ ಮುಖ್ಯಸ್ಥ ಮೊಹಮ್ಮದ್ ಫಾರೂಕ್ ಅವರು ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ದೃಢಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಾರಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮೊಫಿಜುರ್ ರೆಹಮಾನ್ ಪ್ರತಿಕ್ರಿಯಿಸಿದ್ದು, ಈ ಅಮಾನವೀಯ ಕೃತ್ಯದ ಕುರಿತು ಪೊಲೀಸರು ಈಗಾಗಲೇ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಹಣ ವರ್ಗಾವಣೆಯಾದ ಫೋನ್ ನಂಬರ್ ಆಧರಿಸಿ ಅಪಹರಣಕಾರರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮನೆಯಲ್ಲೇ ಕುಸಿದು ಬಿದ್ದು ಉಪ ವಲಯ ಅರಣ್ಯಾಧಿಕಾರಿ ಸಾವು!



















