ನವದೆಹಲಿ : ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಮೇಘಾಲಯದ ಹನಿಮೂನ್ ಮರ್ಡರ್ ಪ್ರಕರಣದಲ್ಲಿ, ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಸೋನಮ್ ರಘುವಂಶಿ ಅವರಿಗೆ ಮಂಜೂರಾಗಿರುವ ಜಾಮೀನಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ಆರೋಪಿಯು ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿರುವುದನ್ನು ಗಮನಿಸಿ ಸದ್ಯಕ್ಕೆ ಜಾಮೀನು ಮುಂದುವರಿಕೆಗೆ ಹಸಿರು ನಿಶಾನೆ ತೋರಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಹೈಕೋರ್ಟ್ ಆದೇಶದ ಬಗ್ಗೆ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದೆಯಾದರೂ, ಸದ್ಯದ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮೊದಲು ವಿಚಾರಣೆಯ ಪ್ರಗತಿಯನ್ನು ಗಮನಿಸುವುದಾಗಿ ತಿಳಿಸಿರುವ ಪೀಠವು, ಆರೋಪಿ ಸೋನಮ್ ರಘುವಂಶಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 9 ಕ್ಕೆ ಮುಂದೂಡಿದೆ.
ಮಧ್ಯಪ್ರದೇಶದ ಇಂದೋರ್ ನಿವಾಸಿಯಾದ ಸೋನಮ್ ಮತ್ತು ರಾಜಾ ರಘುವಂಶಿ ಕಳೆದ ವರ್ಷ ವಿವಾಹವಾಗಿದ್ದು, ಮೇ ತಿಂಗಳಲ್ಲಿ ಮೇಘಾಲಯಕ್ಕೆ ಮಧುಚಂದ್ರಕ್ಕೆಂದು ಬಂದಿದ್ದರು. ಮೇ 23ರಂದು ಸೊಹ್ರಾ ಪ್ರದೇಶದಲ್ಲಿ ಈ ದಂಪತಿ ನಾಪತ್ತೆಯಾಗಿದ್ದರು. ತನಿಖೆಯ ನಂತರ, ಸುಮಾರು 9 ದಿನಗಳ ಬಳಿಕ ರಾಜಾ ರಘುವಂಶಿ ಅವರ ಮೃತದೇಹವು ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಈ ಕೊಲೆಗೆ ಪತ್ನಿಯೇ ಕಾರಣ ಎಂದು ಆರೋಪಿಸಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಮೇಘಾಲಯ ಪೊಲೀಸರು ಸೋನಮ್ ಅವರನ್ನು ಬಂಧಿಸಿದ್ದರು.
ತಾಂತ್ರಿಕ ದೋಷದ ಕಾರಣಕ್ಕೆ ಜಾಮೀನು ಮಂಜೂರಾತಿ
ಈ ಪ್ರಕರಣದಲ್ಲಿ ಪೊಲೀಸರ ಬೇಜವಾಬ್ದಾರಿತನವೇ ಆರೋಪಿಗೆ ಜಾಮೀನು ಸಿಗಲು ಪ್ರಮುಖ ಕಾರಣವಾಗಿದೆ. ಶಿಲ್ಲಾಂಗ್‌ನ ವಿಚಾರಣಾ ನ್ಯಾಯಾಲಯವು ಏಪ್ರಿಲ್ 27 ರಂದು ಸೋನಮ್‌ಗೆ ಜಾಮೀನು ನೀಡಿತ್ತು. ಬಂಧನದ ಸಮಯದಲ್ಲಿ ತನಿಖಾ ಸಂಸ್ಥೆಯು ಆರೋಪಿಗೆ ಬಂಧನದ ಸರಿಯಾದ ಕಾರಣಗಳನ್ನು ಮತ್ತು ಸೆಕ್ಷನ್‌ಗಳನ್ನು ಲಿಖಿತ ರೂಪದಲ್ಲಿ ತಿಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.
ಬಂಧನದ ಮೆಮೊ, ತನಿಖಾ ಡೈರಿ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳಲ್ಲಿ ಕೊಲೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) ರ ಬದಲಿಗೆ, ಸೆಕ್ಷನ್ 403(1) ಎಂದು ತಪ್ಪಾಗಿ ನಮೂದಿಸಲಾಗಿತ್ತು. ಇದು ಕೇವಲ ಬರವಣಿಗೆಯಲ್ಲಾದ ದೋಷ ಮಾತ್ರವಲ್ಲ, ಆರೋಪಿಗೆ ತಾನು ಯಾವ ಕಾರಣಕ್ಕಾಗಿ ಬಂಧನಕ್ಕೊಳಗಾಗುತ್ತಿದ್ದೇನೆ ಎಂಬ ಕನಿಷ್ಠ ಮಾಹಿತಿಯನ್ನೂ ನೀಡಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಸುಪ್ರೀಂಗೆ ಮೊರೆ
ವಿಚಾರಣಾ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಇದು ಕೇವಲ ಮುದ್ರಣ ದೋಷವಾಗಿದ್ದು, ಇದರಿಂದ ತನಿಖೆಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸರ್ಕಾರ ವಾದಿಸಿತ್ತು. ಆದರೆ ಜೂನ್ 29 ರಂದು ಅರ್ಜಿಯನ್ನು ವಜಾಗೊಳಿಸಿದ ಮೇಘಾಲಯ ಹೈಕೋರ್ಟ್‌ನ ನ್ಯಾಯಮೂರ್ತಿ ಡಬ್ಲ್ಯೂ. ಡೀಂಗ್ಡೋಹ್ ಅವರ ಏಕಸದಸ್ಯ ಪೀಠವು, ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಪೊಲೀಸರು ಹಳೆಯ ಮಾದರಿಗಳನ್ನು ಬಳಸಿಕೊಂಡು ಯಾಂತ್ರಿಕವಾಗಿ ದಾಖಲೆ ಸೃಷ್ಟಿಸಿದ್ದಾರೆ. ದಾಖಲೆಯೊಂದರಲ್ಲಿ ಆರೋಪಿಯನ್ನು ಸಶಸ್ತ್ರ ಪಡೆಯಿಂದ ಓಡಿಹೋದ ದೇಶದ್ರೋಹಿ ಎಂದೂ ಉಲ್ಲೇಖಿಸಲಾಗಿದೆ. ಇದು ತನಿಖಾಧಿಕಾರಿಗಳು ಯಾವುದೇ ವಿವೇಚನೆ ಬಳಸದೆ, ಬೇಜವಾಬ್ದಾರಿಯಿಂದ ಕೆಲಸ ಮಾಡಿರುವುದನ್ನು ತೋರಿಸುತ್ತದೆ ಎಂದು ಹೈಕೋರ್ಟ್ ಖಂಡಿಸಿತ್ತು. ಹೈಕೋರ್ಟ್‌ನ ಈ ತೀರ್ಪಿನ ಬೆನ್ನಲ್ಲೇ ಮೇಘಾಲಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸದ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಮುಂದಿನ ವಾರ ನಡೆಯಲಿರುವ ವಿಚಾರಣೆ ಈಗ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಡೇ ಕೇರ್ನಲ್ಲಿ ರಾಕ್ಷಸೀಯ ಕೃತ್ಯ – ಕಂದಮ್ಮಗಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಇಬ್ಬರ ಬಂಧನ!


















