ಮಂಗಳೂರು : ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ನಾಲ್ಕು ಜಿಲ್ಲೆಗಳ ಜನರಿಗೆ ದೀರ್ಘಕಾಲದಿಂದ ಕಾಡುತ್ತಿರುವ ನ್ಯಾಯಾಂಗ ಸೇವೆಗಳ ಸವಾಲಿಗೆ ಶೀಘ್ರದಲ್ಲೇ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ. ಮಂಗಳೂರಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದ ಬೇಡಿಕೆ ಇದೀಗ ಮಹತ್ವದ ಹಂತ ತಲುಪಿದ್ದು, ಇದೇ ಅಕ್ಟೋಬರ್‌ನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಸದ್ಯಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ಹಳೆಯ ಜಿಲ್ಲಾಧಿಕಾರಿ (DC) ಕಚೇರಿಯ 50,000 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಪೀಠವನ್ನು ಆರಂಭಿಸಲು ಗುರುತಿಸಲಾಗಿದ್ದು, ಲೋಕೋಪಯೋಗಿ ಇಲಾಖೆ (PWD) ಮೂಲಕ ಇದರ ನವೀಕರಣ ಕಾರ್ಯ ನಡೆಯಲಿದೆ. ಸಂಚಾರಿ ಪೀಠಕ್ಕೆ ನಿಯೋಜನೆಗೊಳ್ಳಲಿರುವ ಸುಮಾರು 4 ನ್ಯಾಯಾಧೀಶರ ವಸತಿಗಾಗಿ ನಗರದ ಲಾಲ್‌ಬಾಗ್ ಪ್ರದೇಶದಲ್ಲಿರುವ ಐಎಎಸ್ ಅಧಿಕಾರಿಗಳ ಕ್ವಾರ್ಟಸ್ ಆವರಣದಲ್ಲಿ ಜಾಗ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವರ್ಷದ ದಸರಾ ಅಥವಾ ಅಕ್ಟೋಬರ್ ವೇಳೆಗೆ ಕರಾವಳಿ ಜನರ ಈ ಬಹುಕಾಲದ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ. ಮಂಗಳೂರಿನಲ್ಲಿ ಸಂಚಾರಿ ಪೀಠ ಆರಂಭವಾದರೆ ಕರಾವಳಿ ಮತ್ತು ಮಲೆನಾಡು ಭಾಗದ ಒಟ್ಟು 5 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
- ದಕ್ಷಿಣ ಕನ್ನಡ
- ಉಡುಪಿ
- ಉತ್ತರ ಕನ್ನಡ
- ಚಿಕ್ಕಮಗಳೂರು
- ಕೊಡಗು
ಪುಸ್ತುತ ಈ ಜಿಲ್ಲೆಗಳ ಸಾರ್ವಜನಿಕರು ಮತ್ತು ವಕೀಲರು ಸಣ್ಣ ಹೈಕೋರ್ಟ್ ಕೆಲಸಗಳಿಗೂ ಬೆಂಗಳೂರಿಗೆ ಅಲೆಯಬೇಕಾಗಿದ್ದು, ಆರ್ಥಿಕ ಹಾಗೂ ಸಮಯದ ನಷ್ಟವಾಗುತ್ತಿದೆ. ಸಂಚಾರಿ ಪೀಠದಿಂದಾಗಿ ತ್ವರಿತ ಮತ್ತು ಕೈಗೆಟುಕುವ ನ್ಯಾಯ ಸಿಗಲಿದೆ. ಆದಾಗ್ಯೂ, ಈ ಪೀಠದ ಅಂತಿಮ ವ್ಯಾಪ್ತಿಯ ನಿರ್ಧಾರವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ತೆಗೆದುಕೊಳ್ಳಲಿದ್ದಾರೆ.
ಬೆಂಗಳೂರು ವಕೀಲರ ಸಂಘ ವಿರೋಧ :
ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸುವ ಸರ್ಕಾರದ ಪುಸ್ತಾವನೆಗೆ ಬೆಂಗಳೂರಿನ ವಕೀಲರ ಸಂಘವು (Advocates’ Association Bengaluru – AAB) ವಿರೋಧ ವ್ಯಕ್ತಪಡಿಸಿದೆ. ಹೈಕೋರ್ಟ್‌ನಲ್ಲಿ ಈಗಾಗಲೇ ನ್ಯಾಯಾಧೀಶರ ಕೊರತೆ ಇರುವಾಗ ಮತ್ತೊಂದು ಪೀಠ ಸ್ಥಾಪಿಸುವುದು ಸರಿಯಲ್ಲ ಮತ್ತು ಇದು ಅವಧಿಪೂರ್ವ ನಿರ್ಧಾರ ಎಂದು ಸಿಜೆ ವಿಭು ಬಖು ಅವರಿಗೆ ಅಧಿಕೃತ ಪತ್ರ ಬರೆದು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಿದೆ.
ಮಂಗಳೂರು ವಕೀಲರ ಸಂಘದಿಂದ ಪ್ರತ್ಯುತ್ತರ
ಬೆಂಗಳೂರು ವಕೀಲರ ವಾದಗಳನ್ನು ಕರಾವಳಿ ವಕೀಲರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಪುಮುಖ ಕಾರಣಗಳನ್ನು ಮುಂದಿಟ್ಟಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದಲೇ ಬೆಂಗಳೂರು ಹೈಕೋರ್ಟ್‌ನಲ್ಲಿ ಸಾವಿರಾರು ಅಪೀಲು ಮತ್ತು ರಿಟ್ ಅರ್ಜಿಗಳು ದಾಖಲಾಗುತ್ತಿವೆ. ಹಾಗಾಗಿ ‘ಅಂಕಿ-ಅಂಶಗಳಿಲ್ಲ’ ಎಂಬ ವಾದ ತಪ್ಪು ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ. ಕರಾವಳಿಯ ಕಡುಬಡವರು, ಕಾರ್ಮಿಕರು ಸಣ್ಣ ಕೆಲಸಗಳಿಗೂ ಬೆಂಗಳೂರಿಗೆ ಪುಯಾಣ ಬೆಳೆಸಿ, ಅಲ್ಲಿ ವಾಸವಿದ್ದು ಕೋರ್ಟ್ ವೆಚ್ಚ ಭರಿಸುವುದು ದುಬಾರಿಯಾಗಿದೆ. ಮಂಗಳೂರಿನಲ್ಲಿ ಪೀಠವಾದರೆ ಬಡವರಿಗೆ “ಮನೆಯ ಬಾಗಿಲಿಗೇ ನ್ಯಾಯ ಸಿಕ್ಕಂತಾಗುತ್ತದೆ. ಈ ಹಿಂದೆ ಉತ್ತರ ಕರ್ನಾಟಕದ ಧಾರವಾಡ ಮತ್ತು ಕಲಬುರಗಿಯಲ್ಲಿ ಸಂಚಾರಿ ಪೀಠಗಳನ್ನು ಸ್ಥಾಪಿಸುವಾಗಲೂ ಬೆಂಗಳೂರು ವಕೀಲರು ಇದೇ ರೀತಿ ವಿರೋಧಿಸಿದ್ದರು. ಆದರೆ ಇಂದು ಆ ಪೀಠಗಳು ಯಶಸ್ವಿಯಾಗಿ ನಡೆದು ಆ ಭಾಗದ ಜನರಿಗೆ ಹತ್ತಿರವಾಗಿವೆ. ಅದೇ ಮಾದರಿ ಮಂಗಳೂರಿಗೂ ಅನ್ವಯಿಸಬೇಕು ಎಂದು ಮಂಗಳೂರು ವಕೀಲರ ಸಂಘ ತಿಳಿಸಿದೆ.
ಇದನ್ನೂ ಓದಿ : ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಮೆಸ್ಸಿ ಪಡೆಗೆ ಸೋಲಿನ ಪೇನ್.. ಗೆದ್ದು ಬೀಗಿದ ಸ್ಪೇನ್!


















