ನವದೆಹಲಿ : ಯುದ್ಧಪೀಡಿತ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ಪೂರೈಸುವ ಉದ್ದೇಶದಿಂದ ಕೈಗೊಂಡಿದ್ದ ಬೃಹತ್ ರಕ್ಷಣಾ ಒಪ್ಪಂದದಲ್ಲಿ ದೊಡ್ಡ ಮಟ್ಟದ ಲೋಪವೆಸಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಎಸ್ಟೋನಿಯಾದ ರಕ್ಷಣಾ ಸಚಿವ ಹನ್ನೊ ಪೆವ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಮಾರು 70 ಮಿಲಿಯನ್ ಯುರೋ (ಅಂದಾಜು 770 ಕೋಟಿ ರೂಪಾಯಿ) ಮೌಲ್ಯದ ಈ ಒಪ್ಪಂದವು ಭಾರತೀಯ ಮೂಲದ ಮಾಲೀಕತ್ವ ಹೊಂದಿರುವ ಸಂಸ್ಥೆಯೊಂದಿಗೆ ನಡೆಸಲಾಗಿತ್ತು. ಈ ವ್ಯವಹಾರದಲ್ಲಿ ವ್ಯಾಪಕ ಅಕ್ರಮ ಹಾಗೂ ಲೋಪಗಳು ನಡೆದಿವೆ ಎಂಬ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ, ಸಚಿವರು ರಾಜಕೀಯ ಹೊಣೆ ಹೊತ್ತು ಹುದ್ದೆಯಿಂದ ನಿರ್ಗಮಿಸಿದ್ದಾರೆ.
ಏನಿದು ಒಪ್ಪಂದ?
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರಗೊಂಡಿದ್ದ ಸಂದರ್ಭದಲ್ಲಿ ಉಕ್ರೇನ್‌ಗೆ ತುರ್ತಾಗಿ ಕಿರಿಯ ಮತ್ತು ಹಿರಿಯ ಶ್ರೇಣಿಯ ಫಿರಂಗಿ ಗುಂಡುಗಳ (Artillery Shells) ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟದ ‘ಯುರೋಪಿಯನ್ ಪೀಸ್ ಫೆಸಿಲಿಟಿ’ ನಿಧಿಯನ್ನು ಬಳಸಿಕೊಂಡು ಎಸ್ಟೋನಿಯಾದ ‘ಸೆಂಟರ್ ಫಾರ್ ಡಿಫೆನ್ಸ್ ಇನ್ವೆಸ್ಟ್‌ಮೆಂಟ್ಸ್’ ಸಂಸ್ಥೆಯು ಶಸ್ತ್ರಾಸ್ತ್ರ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು.
2024ರಲ್ಲಿ ಭಾರತದ ‘ನೆಕೋ ಡಿಫೆನ್ಸ್ ಮುನಿಷನ್ಸ್’ ಸಂಸ್ಥೆಯು ಇಟಲಿ ಮೂಲದ ‘ಡೇಟಾಸೆಲ್ ಎಸ್‌ಆರ್‌ಎಲ್’ ಎಂಬ ಕಂಪನಿಯನ್ನು ತನ್ನದಾಗಿಸಿಕೊಂಡಿತ್ತು. ಈ ಕಂಪನಿಯೊಂದಿಗೆ ಎಸ್ಟೋನಿಯಾ ರಕ್ಷಣಾ ಇಲಾಖೆಯು ಶಸ್ತ್ರಾಸ್ತ್ರ ಪೂರೈಕೆಗೆ ಬೃಹತ್ ಮೊತ್ತದ ಮುಂಗಡ ಹಣ ನೀಡಿ ಒಪ್ಪಂದಕ್ಕೆ ಸಹಿ ಹಾಕಿತ್ತು.
ಕಳಪೆ ಗುಣಮಟ್ಟ, ಪೂರೈಕೆಯಲ್ಲಿ ವಿಳಂಬ
ಒಪ್ಪಂದದ ಪ್ರಕಾರ ಕೆಲವೇ ತಿಂಗಳುಗಳಲ್ಲಿ ಶಸ್ತ್ರಾಸ್ತ್ರಗಳು ಉಕ್ರೇನ್‌ಗೆ ತಲುಪಬೇಕಿತ್ತು. ಆದರೆ, ಪೂರೈಕೆದಾರ ಸಂಸ್ಥೆಯು ಸರಕನ್ನು ಕಳುಹಿಸಲು ನಿರಂತರವಾಗಿ ವಿಳಂಬ ಮಾಡಿತು. ತನಿಖಾ ವರದಿಗಳ ಪ್ರಕಾರ, ಈ ಒಪ್ಪಂದಕ್ಕೂ ಮೊದಲು ಡೇಟಾಸೆಲ್ ಕಂಪನಿಯು ಒಂದೇ ಒಂದು ಫಿರಂಗಿ ಗುಂಡನ್ನೂ ಉತ್ಪಾದಿಸಿದ ಅಥವಾ ಮಾರಾಟ ಮಾಡಿದ ಅನುಭವ ಹೊಂದಿರಲಿಲ್ಲ.
ಕೊನೆಗೂ 2025ರಲ್ಲಿ ಸರಕು ಎಸ್ಟೋನಿಯಾಗೆ ತಲುಪಿತಾದರೂ, ಅವು ಕಳಪೆ ಹಾಗೂ ದೋಷಪೂರಿತ ಗುಣಮಟ್ಟದಿಂದ ಕೂಡಿದ್ದವು. ಪರಿಣಾಮವಾಗಿ, ಸರಬರಾಜಾದ ಯಾವುದೇ ಅಸ್ತ್ರಗಳನ್ನು ಉಕ್ರೇನ್‌ಗೆ ಕಳುಹಿಸಲು ಸಾಧ್ಯವಾಗಲಿಲ್ಲ. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಎಸ್ಟೋನಿಯಾ ಸರ್ಕಾರ, ಒಪ್ಪಂದವನ್ನು ರದ್ದುಗೊಳಿಸಿ ನೀಡಿರುವ ಹಣವನ್ನು ಮರಳಿ ಪಡೆಯಲು ಕಾನೂನು ಹೋರಾಟ ಹಾಗೂ ಮಧ್ಯಸ್ಥಿಕೆ (Arbitration) ಪ್ರಕ್ರಿಯೆಯನ್ನು ಆರಂಭಿಸಿದೆ.
ಆರೋಪ ನಿರಾಕರಿಸಿದ ಸರಬರಾಜು ಸಂಸ್ಥೆ
ಇನ್ನೊಂದೆಡೆ, ಸರಬರಾಜುದಾರ ಸಂಸ್ಥೆಯಾದ ಡೇಟಾಸೆಲ್ ಎಸ್ಟೋನಿಯಾ ಸರ್ಕಾರದ ಆರೋಪಗಳನ್ನು ನಿರಾಕರಿಸಿದೆ. ತಾನು ಒಪ್ಪಂದದಂತೆ ಗಮನಾರ್ಹ ಪ್ರಮಾಣದ ಸರಕನ್ನು ಈಗಾಗಲೇ ಪೂರೈಸಿದ್ದು, ಸುಮಾರು 58 ಮಿಲಿಯನ್ ಯುರೋ ಮೌಲ್ಯದ ಬಿಲ್‌ಗಳನ್ನು ಸಲ್ಲಿಸಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ, ಗುಣಮಟ್ಟದ ನೆಪವೊಡ್ಡಿ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿರುವುದು ಸರಿಯಲ್ಲ ಎಂದು ಕಂಪನಿ ವಾದಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಟೋನಿಯಾ ಸೆಂಟರ್ ಫಾರ್ ಡಿಫೆನ್ಸ್ ಇನ್ವೆಸ್ಟ್‌ಮೆಂಟ್ಸ್ ಮುಖ್ಯಸ್ಥ ಎಲ್ಮಾರ್ ವಹೇರ್, “ಮನೆ ಕಟ್ಟಿದ ಅನುಭವವೇ ಇಲ್ಲದ ಕಂಪನಿಗೆ ಮನೆ ಕಟ್ಟುವ ಗುತ್ತಿಗೆ ನೀಡಿದರೆ ಅದು ಹೇಗೆ ಪೂರ್ಣಗೊಳ್ಳುವುದಿಲ್ಲವೋ, ಅದೇ ರೀತಿ ಅನುಭವವಿಲ್ಲದ ಕಂಪನಿಯೊಂದಿಗೆ ಈ ಒಪ್ಪಂದ ಮಾಡಿಕೊಂಡಿದ್ದೇ ದೊಡ್ಡ ತಪ್ಪು” ಎಂದು ಒಪ್ಪಿಕೊಂಡಿದ್ದಾರೆ.
ರಾಜಕೀಯ ಹೊಣೆ ಹೊತ್ತು ರಾಜೀನಾಮೆ
ಎಸ್ಟೋನಿಯಾದ ರಾಷ್ಟ್ರೀಯ ಆಡಿಟ್ ಕಚೇರಿಯು ದೇಶದ ರಕ್ಷಣಾ ಇಲಾಖೆಯ ಖರ್ಚು ವೆಚ್ಚಗಳು ಮತ್ತು ಖರೀದಿ ಪ್ರಕ್ರಿಯೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವರದಿ ನೀಡಿದ ಬೆನ್ನಲ್ಲೇ ಸಚಿವ ಹನ್ನೊ ಪೆವ್ಕರ್ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ. ವಿಫಲ ಒಪ್ಪಂದದಿಂದಾಗಿ ನಷ್ಟವಾದ 770 ಕೋಟಿ ರೂಪಾಯಿಯನ್ನು ಕಂಪನಿಯಿಂದ ಮರಳಿ ಪಡೆಯಲು ಸಾಧ್ಯವಾಗದಿದ್ದರೆ, ಆ ಹೊರೆಯನ್ನು ದೇಶದ ಬಜೆಟ್‌ನಿಂದಲೇ ಭರಿಸಬೇಕಾಗಬಹುದು ಎಂದು ಆಡಿಟ್ ಸಂಸ್ಥೆ ಎಚ್ಚರಿಸಿದೆ.
ತಮ್ಮ ರಾಜೀನಾಮೆ ಕುರಿತು ಮಾತನಾಡಿದ ಹನ್ನೊ ಪೆವ್ಕರ್, “ವೈಯಕ್ತಿಕವಾಗಿ ನಾನು ಪ್ರತಿಯೊಂದು ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿರಲಿಲ್ಲ ಮತ್ತು ನಿಯಮಾವಳಿಗಳ ದಾಖಲೆಗಳನ್ನು ಪೂರ್ಣವಾಗಿ ಓದಿರಲಿಲ್ಲ. ಒಪ್ಪಂದದ ಪ್ರಕ್ರಿಯೆಗಳನ್ನು ರಕ್ಷಣಾ ಹೂಡಿಕೆ ಕೇಂದ್ರವೇ ನೋಡಿಕೊಳ್ಳುತ್ತದೆ.
ಆದರೆ, ರಕ್ಷಣಾ ಕ್ಷೇತ್ರದ ಮುಖ್ಯಸ್ಥನಾಗಿ ರಾಜಕೀಯ ಹೊಣೆಗಾರಿಕೆ ವಹಿಸುವುದು ನನ್ನ ಕರ್ತವ್ಯ. ವೈಯಕ್ತಿಕ ತಪ್ಪಿಲ್ಲದಿದ್ದರೂ ಜವಾಬ್ದಾರಿ ಸ್ವೀಕರಿಸುವ ಧೈರ್ಯ ನಾಯಕನಿಗಿರಬೇಕು” ಎಂದು ಹೇಳಿದ್ದಾರೆ. 2022ರಿಂದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದ ಪೆವ್ಕರ್, ತಮ್ಮ ಅವಧಿಯಲ್ಲಿ ಎಸ್ಟೋನಿಯಾದ ಭದ್ರತೆಯನ್ನು ಬಲಪಡಿಸಲು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ಪ್ರತಿಪಾದಿಸಿದ್ದಾರೆ
ಇದನ್ನೂ ಓದಿ : ಎವರೆಸ್ಟ್ ಹಿಮನದಿ ಕರಗಲು ಮಾನವನ ಮೂತ್ರ ಕಾರಣವೇ? ಬೇಸ್ ಕ್ಯಾಂಪ್‌ನ ಭೀಕರ ವರದಿ ತೆರೆದಿಟ್ಟ ರಹಸ್ಯ!



















