ಮುಂಬೈ: ಮಹಾರಾಷ್ಟ್ರದ ಮುಂಬೈನ ಪ್ರತಿಷ್ಠಿತ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಸಂಸ್ಥೆಯು ಆಗಸ್ಟ್ 2 ರಂದು ಆಯೋಜಿಸಿದ್ದ ತನ್ನ 86ನೇ ಘಟಿಕೋತ್ಸವ ಮತ್ತು ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು ದಿಢೀರನೆ ಮುಂದೂಡಿದೆ. ಕಾರ್ಯಕ್ರಮಕ್ಕೆ ಕೇವಲ ಎರಡೇ ದಿನಗಳು ಬಾಕಿ ಇರುವಾಗ, “ಅನಿವಾರ್ಯ ಕಾರಣಗಳಿಂದ” ಸಮಾರಂಭವನ್ನು ಮುಂದೂಡಲಾಗುತ್ತಿದೆ ಎಂದು ಸಂಸ್ಥೆಯ ಕುಲಸಚಿವರು ಗುರುವಾರ ಮಧ್ಯರಾತ್ರಿ ವಿದ್ಯಾರ್ಥಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ. ವಿಶೇಷವೆಂದರೆ ಈ ಸಮಾರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮುಖ್ಯ ಅತಿಥಿಯಾಗಿ ಹಾಗೂ ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರವೀಂದ್ರ ಘುಗೆ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಬೇಕಿತ್ತು.
ಪ್ರತಿಭಟನೆಯ ಆತಂಕ ಕಾರಣವೇ?
ಕ್ಯಾಂಪಸ್‌ನಲ್ಲಿ ಗಣ್ಯರನ್ನು ಗುರಿಯಾಗಿಸಿಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಈ ನಿರ್ಧಾರ ತಳೆದಿದೆ. ನಿರುದ್ಯೋಗಿಗಳನ್ನು ಇತ್ತೀಚೆಗೆ ಜಿರಳೆಗಳಿಗೆ ಸಿಜೆಐ ಸೂರ್ಯಕಾಂತ್ ಹೋಲಿಸಿದ್ದಾರೆ ಎಂಬ ಆರೋಪದ ಮೇರೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಹುಟ್ಟಿಕೊಂಡಿತ್ತು. ಇದೇ ಸಂಘಟನೆಯ ಚಳವಳಿಗೆ ಸಂಬಂಧಿಸಿದ ಪ್ರತಿಭಟನೆಗಳು ಘಟಿಕೋತ್ಸವ ಕಾರ್ಯಕ್ರಮದ ವೇಳೆ ಭುಗಿಲೇಳಬಹುದು ಎಂಬ ಆತಂಕ ಆಡಳಿತ ಮಂಡಳಿಗೆ ಇತ್ತು. ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಸ್ಥೆಯು, “ಪ್ರಸ್ತುತ ವಾತಾವರಣವು ಕಾರ್ಯಕ್ರಮಕ್ಕೆ ಸೂಕ್ತವಾಗಿಲ್ಲ. ನಿಗದಿತ ವೇಳಾಪಟ್ಟಿಯಂತೆ ಮುಂದುವರಿದರೆ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಹಾಗೂ ಗಣ್ಯರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆಯಿತ್ತು. ಸಂಸ್ಥೆಯ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳು, ಪೋಷಕರ ಆಕ್ರೋಶ
ಕಡೇ ಕ್ಷಣದಲ್ಲಿ ಸಮಾರಂಭ ರದ್ದಾಗಿರುವುದು ಪದವಿ ಪಡೆಯಲು ಕಾತರರಾಗಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ತೀವ್ರ ನಿರಾಶೆ ಹಾಗೂ ಆಕ್ರೋಶ ಮೂಡಿಸಿದೆ. ಘಟಿಕೋತ್ಸವಕ್ಕಾಗಿ ಈಗಾಗಲೇ ವಿಮಾನ, ರೈಲು ಟಿಕೆಟ್ ಹಾಗೂ ಹೋಟೆಲ್‌ಗಳನ್ನು ಕಾಯ್ದಿರಿಸಿದ್ದ ಪೋಷಕರಿಗೆ ಭಾರೀ ನಷ್ಟ ಉಂಟಾಗಿದೆ. ಇದನ್ನು ಮನಗಂಡಿರುವ ಸಂಸ್ಥೆಯು, ಕೊನೆಯ ಕ್ಷಣದ ರದ್ದತಿಯಿಂದ ತೊಂದರೆಗೊಳಗಾದ ಕುಟುಂಬಗಳ ಮನವಿಗಳನ್ನು ಪರಿಶೀಲಿಸಿ ಆರ್ಥಿಕ ನಷ್ಟ ಭರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಜೊತೆಗೆ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಮತ್ತು ತುರ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪ್ರಮಾಣಪತ್ರಗಳನ್ನು ನೀಡುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದೆ.
ಇದನ್ನೂ ಓದಿ : ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ : ಇಬ್ಬರು ವಲಸೆ ಕಾರ್ಮಿಕರ ಹತ್ಯೆ!



















