ರಾಮನಗರ : ಸಿಎಂ ಆಗಿ ಅಧಿಕಾರದ ಗದ್ದುಗೆ ಏರಿರುವ ಡಿಕೆ ಶಿವಕುಮಾರ್, ತಮ್ಮ ಕ್ಷೇತ್ರದ ಜನರಿಗೆ ಇಂದು ಕೃತಜ್ನತೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಪಟ್ಟಕ್ಕೇರಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ಕೊಟ್ಟಿರುವ ಅವರು ಜನರ ನಡುವೆ ನಿಂತು, ನಾನು ನಿಮ್ಮ ಮನೆ ಮಗ, ನಿಮ್ಮೊಂದಿಗೆ ಸದಾ ಇರುತ್ತೇನೆ ಎನ್ನುವ ಸಂದೇಶ ರವಾನಿಸಿದ್ದಾರೆ.
ನೀವು ಗೆಲ್ಲಿಸಿದ್ದಕ್ಕೆ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಫಲವಾಗಿದ್ದೇನೆ. ನಿಮ್ಮ ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ಇಕ್ಬಾಲ್ ಹುಸೇನ್ರನ್ನು ಗೆಲ್ಲಿಸಿದ್ದೀರಿ. ಇಕ್ಬಾಲ್ ಹುಸೇನ್ ಹೆಸರಿಗೆ ಮಾತ್ರ, ರಾಮನಗರಕ್ಕೆ ನಾನೇ ಶಾಸಕ ಎಂದು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿದ್ದು ಐತಿಹಾಸಿಕ ನಿರ್ಧಾರ. ಹೆಸರು ಬದಲಾವಣೆಯಿಂದ ನಿಮ್ಮ ಭೂಮಿಯ ಬೆಲೆ ಹೆಚ್ಚಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋದಕ್ಕೆ ಕೆಲವರು ವಿರೋಧಿಸಿದರು. ಜಿಲ್ಲೆಯ ಹೆಸರು ಬದಲಾವಣೆಯಿಂದ ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಹಾರೋಹಳ್ಳಿ ಅಭಿವೃದ್ಧಿಗೆ ಪ್ರತ್ಯೇಕ ಮೀಟಿಂಗ್ ಮಾಡುತ್ತೇನೆ. ಕನಕಪುರದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುತ್ತೇವೆ. ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದವರಿಗೂ ಅನುಕೂಲವಾಗುತ್ತದೆ. ಇಲ್ಲಿನ ಜನರು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಉತ್ತಮ ವಿದ್ಯಾಭ್ಯಾಸ ಇಲ್ಲೇ ದೊರಕುವಂತೆ ಮಾಡುತ್ತೇವೆ ಎಂದರು.
ಇನ್ನು ಕನಕಪುರಕ್ಕೆ ತೆರಳುವ ಮುನ್ನ ಸಿಎಂ ಡಿಕೆ ಶಿವಕುಮಾರ್, ಮಾದರಿ ಹೆಜ್ಜೆಯೊಂದನ್ನ ಇಟ್ಟಿದ್ದು, ಝೀರೋ ಟ್ರಾಫಿಕ್ ತಪ್ಪಿಸುವುದಕ್ಕಾಗಿ ವಿಧಾನಸೌಧದದಿಂದ ರೇಷ್ಮೆ ಸಂಸ್ಥೆವರೆಗೆ ಮೆಟ್ರೋದಲ್ಲಿಯೇ ತೆರಳಿದ್ದಾರೆ. ಮೆಟ್ರೋದಲ್ಲಿ ಪ್ರಯಾಣ ವೇಳೆ, ಜನರೊಂದಿಗೆ ಆತ್ಮೀಯವಾಗಿ ಬೆರೆತು, ಮಾತುಕತೆ ಮಾಡಿದ್ದಾರೆ.
ಇದನ್ನೂಮ ಓದಿ : ಸರ್ಕಾರಿ ಹಣದ ಜಾಲ, ರಹಸ್ಯ ಖಾತೆಗಳು, 661 ಕೋಟಿ ರೂ.ಗುಳುಂ : ಹರಿಯಾಣದಲ್ಲಿ CBI ಬೃಹತ್ ಕಾರ್ಯಾಚರಣೆ



















