ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಮುಖ್ಯ ಕೋಚ್ ಹುದ್ದೆಯನ್ನು ಸ್ವೀಕರಿಸುವ ಮುನ್ನ ದಿನೇಶ್ ಕಾರ್ತಿಕ್ ಎರಡು ಬಾರಿ ಯೋಚಿಸುವುದು ಒಳಿತು ಎಂದು ಭಾರತದ ಮಾಜಿ ಬ್ಯಾಟರ್ ಎಸ್. ಬದರಿನಾಥ್ ಸಲಹೆ ನೀಡಿದ್ದಾರೆ. ಸಿಎಸ್ಕೆ ತಂಡದ ಕೋಚ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಸೂಕ್ತ ವ್ಯಕ್ತಿ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಬೆಂಬಲ ಸೂಚಿಸಿದ ಬೆನ್ನಲ್ಲೇ ಬದರಿನಾಥ್ ಈ ಹೇಳಿಕೆ ನೀಡಿದ್ದಾರೆ.
ಕಳೆದ 18 ವರ್ಷಗಳಿಂದ ಸಿಎಸ್ಕೆ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸ್ಟೀಫನ್ ಫ್ಲೆಮಿಂಗ್ ಅವರು 2026ರ ಜುಲೈನಲ್ಲಿ ತಂಡದಿಂದ ಹೊರಬಂದಿದ್ದಾರೆ. ಫ್ಲೆಮಿಂಗ್ ಅವರು ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದರಿಂದಾಗಿ 2027ರ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್ಕೆ ತನ್ನ ಮುಂದಿನ ಮುಖ್ಯ ಕೋಚ್ ಹುಡುಕಾಟದಲ್ಲಿದೆ. ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಸಿಎಸ್ಕೆ ಐದು ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಪ್ರಸ್ತುತ ಹೊಸ ಕೋಚ್ ಸ್ಥಾನಕ್ಕೆ ಇಯಾನ್ ಮಾರ್ಗನ್, ಬ್ರೆಂಡನ್ ಮೆಕಲಮ್, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್ ಹಾಗೂ ದಿನೇಶ್ ಕಾರ್ತಿಕ್ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಎಂ.ಎಸ್. ಧೋನಿ ಅವರ ನಿರ್ಧಾರಕ್ಕಾಗಿ ಸಿಎಸ್ಕೆ ಕಾಯುತ್ತಿದೆ ಎನ್ನಲಾಗಿದೆ.
ಆರ್ಸಿಬಿ ತೊರೆಯದಿರಲು ಬದರಿನಾಥ್ ಸಲಹೆ
ವೃತ್ತಿಪರ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಸಿಬಿಯಲ್ಲಿ ಅವರ ಪಾತ್ರ ಯಶಸ್ವಿಯಾಗಿದ್ದು, ತಂಡ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಎಸ್. ಬದರಿನಾಥ್, “ನಾನು ದಿನೇಶ್ ಕಾರ್ತಿಕ್ ಸ್ಥಾನದಲ್ಲಿದ್ದರೆ ಸಿಎಸ್ಕೆ ತಂಡಕ್ಕೆ ಹೋಗುವ ಮುನ್ನ ಎರಡು ಬಾರಿ ಯೋಚಿಸುತ್ತಿದ್ದೆ. ಕಾರ್ತಿಕ್ ಆರ್ಸಿಬಿಯಲ್ಲೇ ಉಳಿಯಬೇಕು. ಅಲ್ಲಿ ಎಲ್ಲವೂ ಅದ್ಭುತವಾಗಿ ನಡೆಯುತ್ತಿದ್ದು, ಆಟಗಾರರು ತಮ್ಮ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ,” ಎಂದು ತಿಳಿಸಿದ್ದಾರೆ.
ಆರ್ಸಿಬಿಯಲ್ಲೇ ಮುಂದುವರಿಯುವುದು ಏಕೆ ಸೂಕ್ತ?
ಬದರಿನಾಥ್ ಅವರ ಪ್ರಕಾರ, ಒಂದು ತಂಡದ ಮೇಲೆ ಕೋಚ್ ಬೀರಬಹುದಾದ ಪ್ರಭಾವ ಸೀಮಿತವಾಗಿರುತ್ತದೆ. ಮೈದಾನದಲ್ಲಿ ಆಟಗಾರರ ಪ್ರದರ್ಶನವೇ ಮುಖ್ಯ. ಆರ್ಸಿಬಿಯಲ್ಲಿ ಪ್ರಸ್ತುತ ಆ ಬಲಿಷ್ಠ ವಾತಾವರಣ ನಿರ್ಮಾಣವಾಗಿದೆ. “ಕಾರ್ತಿಕ್ ಈಗಾಗಲೇ ಆರ್ಸಿಬಿಯನ್ನು ಕಠಿಣ ಪರಿಸ್ಥಿತಿಯಿಂದ ಮೇಲೆತ್ತಿ ಬಲಿಷ್ಠಗೊಳಿಸುವ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಈಗ ಅದರ ಪ್ರತಿಫಲವನ್ನು ಅನುಭವಿಸುವ ಸಮಯ. ಹೀಗಿರುವಾಗ ಮತ್ತೊಂದು ಹೊಸ ಸವಾಲನ್ನು ಎದುರಿಸಲು ಸಿಎಸ್ಕೆಗೆ ಏಕೆ ಹೋಗಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ದಿನೇಶ್ ಕಾರ್ತಿಕ್ ಅವರನ್ನು ಆರ್ಸಿಬಿ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂದು ಬದರಿನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಗುರುತು ಪತ್ತೆಯಾಗದ ಮೃತದೇಹಗಳನ್ನು ಹೂಳಲು ನೇಪಾಳ ನಿರ್ಧಾರ : ಭವಿಷ್ಯದಲ್ಲಿ ಗುರುತಿಸುವುದು ಹೇಗೆ?


















