ಬೆಂಗಳೂರು : ಕೆಪಿಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿದೆ. ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಅವರನ್ನು ಸಿಐಡಿ ಅರೆಸ್ಟ್ ಮಾಡಿದೆ.
ಪಶು ವೈದ್ಯಾಧಿಕಾರಿಗಳ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಅವರನ್ನ ಸಿಐಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದು, ಎರಡು ದಿನಗಳ ಬಳಿಕ ಅವರನ್ನ ಬಂಧಿಸಲಾಗಿದೆ.
ಜ್ಞಾನೇಂದ್ರ ಕುಮಾರ್ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ, ಅಂಕ ತಿದ್ದುಪಡಿ ಹಾಗೂ ನೇಮಕಾತಿಯಲ್ಲಿನ ಅಕ್ರಮಗಳ ಕುರಿತಂತೆ ಸಿಐಡಿ ವಿಶೇಷ ತನಿಖಾ ತಂಡ ತೀವ್ರ ತನಿಖೆ ನಡೆಸುತ್ತಿದೆ.
ಪ್ರಕರಣದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು (ಆ.28) ಸತತ 11 ಗಂಟೆಗಳ ಕಾಲ ಜ್ಞಾನೇಂದ್ರ ಕುಮಾರ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಆಗಸ್ಟ್ 29ರಂದು ಮಧ್ಯಾಹ್ನ 12 ಗಂಟೆಯಿಂದ ಮತ್ತೆ ವಿಚಾರಣೆ ಮುಂದುವರಿಸಿದ ತನಿಖಾಧಿಕಾರಿಗಳು, ಅವರು ನೀಡಿದ ಹೇಳಿಕೆಗಳಲ್ಲಿನ ಅಸಮಂಜಸತೆ ಹಾಗೂ ತನಿಖಾ ಪ್ರಕ್ರಿಯೆಗೆ ಸರಿಯಾಗಿ ಸ್ಪಂದಿಸದ ಕಾರಣ ಅಂತಿಮವಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ : ಉದ್ಯಾನವನಗಳ ತಿದ್ದುಪಡಿ ಮಸೂದೆಗೆ ವಿರೋಧ ; ಲಾಲ್‌ಬಾಗ್ ಉಳಿಸಲು ಕರವೇ ಪ್ರವೀಣ್ ಶೆಟ್ಟಿ ಬಣ ಬೃಹತ್ ಪ್ರತಿಭಟನೆ!



















