ನವದೆಹಲಿ : ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಯು ಫೈನಾನ್ಸ್ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಬರೋಬ್ಬರಿ 661 ಕೋಟಿ ರೂ.ಗಳ ಬೃಹತ್ ಸರ್ಕಾರಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಬೆಳ್ಳಂಬೆಳಗ್ಗೆ ಭಾರಿ ಕಾರ್ಯಾಚರಣೆ ನಡೆಸಿದೆ. ಚಂಡೀಗಢ, ಪಂಚಕುಲ ಮತ್ತು ದೆಹಲಿ-ಎನ್‌ಸಿಆರ್‌ನ ಆರು ಪ್ರಮುಖ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಹರ್ಯಾಣ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ನೋಯ್ಡಾ ಮೂಲದ ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಇಲಾಖೆಗಳ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಲು ಸಾರ್ವಜನಿಕ ಸೇವಕರು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಆಳವಾದ ಮ್ಯಾಚ್ ಫಿಕ್ಸಿಂಗ್ ನಡೆದಿರುವುದನ್ನು ಸಿಬಿಐ ಪತ್ತೆಹಚ್ಚಿದೆ.
ನಿಯಮಗಳನ್ನು ಗಾಳಿಗೆ ತೂರಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ರಾಜ್ಯದ ಬೊಕ್ಕಸಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಹಣವನ್ನು ಆ ಖಾತೆಗಳಿಗೆ ವರ್ಗಾಯಿಸುವುದು ಮತ್ತು ನಂತರ ಆ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಬೇರೆಡೆಗೆ ಡೈವರ್ಟ್ ಮಾಡುವ ವ್ಯವಸ್ಥಿತ ಜಾಲ ಇದರ ಹಿಂದೆ ಕೆಲಸ ಮಾಡಿದೆ. ನೋಯ್ಡಾ ಮೂಲದ ‘ವಿಪಾಮ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್’ ಮತ್ತು ಅದರ ನಿರ್ದೇಶಕರು ಈ ಅಪರಾಧದ ನೇರ ಲಾಭವನ್ನು ಪಡೆದಿದ್ದು, ಅಕ್ರಮ ಹಣವು ನಿರ್ದೇಶಕರ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವ ಆಘಾತಕಾರಿ ಸಾಕ್ಷ್ಯಗಳು ಸಿಬಿಐಗೆ ಸಿಕ್ಕಿವೆ.
ಚಂಡೀಗಢ ಪಾಲಿಕೆಗೂ ವಂಚನೆ
ಸಿಬಿಐ ತನಿಖೆಯ ಪ್ರಕಾರ, ಈ ಬೃಹತ್ ಆರ್ಥಿಕ ವಂಚನೆಯು ಹರ್ಯಾಣ ಸರ್ಕಾರದ ಎಂಟು ಪ್ರಮುಖ ಇಲಾಖೆಗಳು ಹಾಗೂ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಎರಡು ಪ್ರಮುಖ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದೆ. ವಿಶೇಷವಾಗಿ ಚಂಡೀಗಢ ಮಹಾನಗರ ಪಾಲಿಕೆ ಮತ್ತು ‘ಚಂಡೀಗಢ ನವೀಕರಿಸಬಹುದಾದ ಇಂಧನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರಚಾರ ಸೊಸೈಟಿ’ಯ ನಿಧಿಗಳನ್ನು ಈ ಜಾಲವು ಲೂಟಿ ಮಾಡಿದೆ. ಭಾನುವಾರ ನಡೆದ ತಪಾಸಣೆಯ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ಹಲವಾರು ಮೌಲ್ಯಯುತ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಆಸ್ತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಪಂಚಕುಲ ಕೋರ್ಟ್‌ಗೆ ಮೊದಲ ಚಾರ್ಜ್‌ಶೀಟ್ ಸಲ್ಲಿಕೆ
ಈಗಾಗಲೇ ತನಿಖೆ ತೀವ್ರಗೊಳಿಸಿರುವ ಸಿಬಿಐ, ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಮೊದಲ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಸಲ್ಲಿಸಿದೆ. ಆರಂಭಿಕ ಚಾರ್ಜ್‌ಶೀಟ್‌ನಲ್ಲಿ ‘ಹರ್ಯಾಣ ಪವರ್ ಜನರೇಷನ್ ಕಾರ್ಪೊರೇಷನ್ ಲಿಮಿಟೆಡ್’ ಮತ್ತು ‘ಹರ್ಯಾಣ ಸ್ಕೂಲ್ ಶಿಕ್ಷಾ ಪರಿಯೋಜನಾ ಪರಿಷತ್’ ಅಧಿಕಾರಿಗಳ ಭ್ರಷ್ಟಾಚಾರದ ಪಾತ್ರವನ್ನು ಬಿಚ್ಚಿಡಲಾಗಿದೆ. ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ತನಿಖೆ ತೀವ್ರಗೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತ ಅಧಿಕಾರಿಗಳ ಹೆಸರುಗಳು ಹೊರಬೀಳುವ ಸಾಧ್ಯತೆಯಿದೆ ಹಾಗೂ ಹೆಚ್ಚಿನ ಚಾರ್ಜ್‌ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : “ದೇಶದ ಯುವಕರು ಯಾರ ಕೈಗೊಂಬೆಯೂ ಅಲ್ಲ” : ‘ಕಾಕ್ರೋಚ್ ಪಾರ್ಟಿ’ ವಿರುದ್ಧ ನಿತಿನ್ ನಬಿನ್ ವಾಗ್ದಾಳಿ


















