ಗದಗ : ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶಿಕ್ಷಣ ಪ್ರೇಮಿ, ಕನಕದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಬಿ.ಎಫ್. ದಂಡಿನ್ ಅವರು 92ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನದಿಂದ ಶಿಕ್ಷಣ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಅಕ್ಷರದಾಸೋಹದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಡಾ. ದಂಡಿನ್ ಅವರು ಶಿಕ್ಷಣ ಸೇವೆಯನ್ನೇ ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.
65ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣದ ಬೆಳಕು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ತಲುಪುವಂತೆ ಶ್ರಮಿಸಿದ ಡಾ. ದಂಡಿನ್ ಅವರನ್ನು ಶಿಕ್ಷಣ ತಪಸ್ವಿ ಎಂದೇ ಜನರು ಕರೆಯುತ್ತಿದ್ದರು.
ಶಿಕ್ಷಣ ಕ್ಷೇತ್ರದಲ್ಲಿನ ಅಪಾರ ಸೇವೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಲಭಿಸಿದ್ದವು. ಡಾ. ದಂಡಿನ್ ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ನೂರಾರು ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು ಹಾಗೂ ಗದಗ ಜಿಲ್ಲೆಯ ಜನರು ಕಂಬನಿ ಮಿಡಿದಿದ್ದಾರೆ.
ಡಾ. ಬಿ.ಎಫ್. ದಂಡಿನ್ ಅವರ ಅಗಲಿಕೆಯಿಂದ ಶಿಕ್ಷಣ ಕ್ಷೇತ್ರವು ದಾರಿದೀಪವೊಂದನ್ನು ಕಳೆದುಕೊಂಡಿದ್ದು, ಅವರು ನೀಡಿದ ಶಿಕ್ಷಣ ಸೇವೆ ಮತ್ತು ಮೌಲ್ಯಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿವೆ.
ಇದನ್ನೂ ಓದಿ : ಇಂದು ಬೆಂಗಳೂರಿನ ಮೊದಲ ಟನಲ್ ರಸ್ತೆ ಕಾಮಗಾರಿಗೆ ಭೂಮಿಪೂಜೆ!



















