ಬೆಂಗಳೂರು : ಕುಡಿಯುವ ನೀರಿನ ವಿಚಾರಕ್ಕೆ ಆರಂಭವಾದ ಸಣ್ಣ ಜಗಳ ಚಾಕು ಇರಿತದವರೆಗೆ ತಲುಪಿರುವ ಆಘಾತಕಾರಿ ಘಟನೆ ನಗರದ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಟಿಂಬರ್ ಯಾರ್ಡ್ ಬಳಿ ನಡೆದಿದೆ.
ರಾತ್ರಿ ಊಟದ ವೇಳೆ ಆಟೋ ಚಾಲಕ ದುಡ್ಡು ಕೊಟ್ಟು ತಂದಿದ್ದ ಕುಡಿಯುವ ನೀರನ್ನು ಟೆಂಪೋ ಚಾಲಕ ಮಹದೇವ ಕುಡಿದಿದ್ದಾನೆ. ಇದನ್ನು ಗಮನಿಸಿದ ಆಟೋ ಚಾಲಕ, “ನಾನು ದುಡ್ಡು ಕೊಟ್ಟು ನೀರು ತಂದಿದ್ದೆ, ನನ್ನನ್ನು ಕೇಳದೆ ಯಾಕೆ ನೀರು ಕುಡಿದಿ?” ಎಂದು ಪ್ರಶ್ನಿಸಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.
ಜಗಳದ ಬಳಿಕ ಮಹದೇವ ತನ್ನ ಮಗನಿಗೆ ಕರೆ ಮಾಡಿ ಸ್ಥಳಕ್ಕೆ ಕರೆದಿದ್ದಾನೆ ಎನ್ನಲಾಗಿದೆ. ಮಹದೇವನ ಮಗ ತನ್ನ ಸ್ನೇಹಿತನೊಂದಿಗೆ ಬಂದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರೂ ಸೇರಿ ಆಟೋ ಚಾಲಕನ ಪೃಷ್ಠಭಾಗಕ್ಕೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳು ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನಾ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹದೇವನನ್ನು ಬಂಧಿಸಿದ್ದಾರೆ. ಚಾಕು ಇರಿದು ಪರಾರಿಯಾಗಿರುವ ಮಹದೇವನ ಮಗ ಹಾಗೂ ಆತನ ಸ್ನೇಹಿತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ತುಮಕೂರಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ!


















