ತುಮಕೂರು : ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲದಲ್ಲಿ ಕಳೆದ ಶನಿವಾರ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕಳೆದ ಶನಿವಾರ ಕೋಳಾಲದ ವಿರೂಪಾಕ್ಷ ಅವರಿಗೆ ಸೇರಿದ ಮಹಿಂದ್ರಾ ಕಾರು ಹಾಗೂ ಎರಡು ಬೈಕ್‌ಗಳಿಗೆ ಮುಸುಕು ಹಾಕಿಕೊಂಡು ಬಂದ ಕಿಡಿಗೇಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆಯ ಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಸಿಸಿ ಕ್ಯಾಮೆರಾ ಆಧರಿಸಿ ತನಿಖೆ ನಡೆಸಿದ ಕೋಳಾಲ ಪೊಲೀಸರು, ಎಂಬಿಬಿಎಸ್ ವೈದ್ಯ ನಾಗಭೂಷಣ್ ಹೆಚ್.ಆರ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಪಿ ನಾಗಭೂಷಣ್ ಕೋಳಾಲದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದ ಮಾಲೀಕರಾಗಿದ್ದು, ತುಮಕೂರಿನಿಂದ ಪೆಟ್ರೋಲ್ ಖರೀದಿಸಿ ತಂದು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಪ್ರಕರಣ ಕೋಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಗೆಲುವು ನಿಶ್ಚಿತ : ಪ್ರಭಾ ಮಲ್ಲಿಕಾರ್ಜುನ್ ವಿಶ್ವಾಸ


















