ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪುತ್ರ ಸಮರ್ಥ್ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ದಾವಣಗೆರೆ ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಶ್ಯಾಮನೂರು ಶಿವಶಂಕರಪ್ಪ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಜನರ ಮನ ಗೆದ್ದಿವೆ. ಈ ಕಾರ್ಯಗಳೇ ಸಮರ್ಥ ಗೆಲುವಿಗೆ ಬಲವಾದ ಅಡಿಪಾಯವಾಗಲಿವೆ ಎಂದು ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ನೇರವಾಗಿ ತಲುಪುತ್ತಿದ್ದು, ಅವುಗಳ ಪರಿಣಾಮವೂ ಚುನಾವಣೆಯಲ್ಲಿ ಸ್ಪಷ್ಟವಾಗಲಿದೆ. ಈ ಯೋಜನೆಗಳೇ ಕಾಂಗ್ರೆಸ್ ಅಭ್ಯರ್ಥಿಗೆ ಶ್ರೀರಕ್ಷೆಯಾಗಿ ಕೆಲಸ ಮಾಡಲಿವೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ರಾಜಕೀಯದಲ್ಲಿ ಯುವಕರ ಪಾಲುದಾರಿಕೆ ಹೆಚ್ಚಬೇಕು ಎಂಬುದನ್ನು ಪ್ರಭಾ ಮಲ್ಲಿಕಾರ್ಜುನ್ ಒತ್ತಿ ಹೇಳಿದ್ದಾರೆ. ತಮ್ಮ ಪುತ್ರನಿಗೆ ಟಿಕೆಟ್ ನೀಡಿರುವ ಬಗ್ಗೆ ಪರೋಕ್ಷವಾಗಿ ಸಮರ್ಥನೆ ನೀಡಿದ ಅವರು, ಎಲ್ಲಾ ವರ್ಗದ ಜನರು ಸಮರ್ಥ ಪರ ಒಲವು ತೋರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರೋಗಿಯನ್ನ 2 ಗಂಟೆ ಹೊರಗೆ ನಿಲ್ಲಿಸಿದ ಮಾಲೂರು ಸರ್ಕಾರಿ ಆಸ್ಪತ್ರೆಯ ವೈದ್ಯರು – ಕ್ರಮಕ್ಕೆ ಆಗ್ರಹ



















