ಬೆಂಗಳೂರು:ದಸರಾ ಹಬ್ಬಕ್ಕೆ ಹೂವು ಮತ್ತು ಹಣ್ಣುಗಳ ಬೆಲೆ ಭಾರಿ ಏರಿಕೆಯಾಗಿದೆ. ಅಕಾಲಿಕ ಮಳೆಗೆ ಹೂವು ಹಾಗೂ ಬೂದುಗುಂಬಳ ಬೆಳೆಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಮಾರುಕಟ್ಟೆಯಲ್ಲಿ ಸೇವಂತಿಗೆ ಮತ್ತು ಚೆಂಡು ಹೂವಿನ ಬೆಲೆ ದುಬಾರಿಯಾಗಿದೆ. ಬೆಲೆ ಏರಿಕೆಯ ನಡುವೆಯೂ ಕೆ.ಆರ್. ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಸದ್ಯ ಸೇವಂತಿಗೆ ಹೂವು ಕೆ.ಜಿ.ಗೆ 200ರಿಂದ 250 ರೂಪಾಯಿಗೆ ಮಾರಾಟವಾಗುತ್ತಿದೆ. ಚೆಂಡು ಹೂವು ಕೆ.ಜಿ.ಗೆ 60 ರೂಪಾಯಿಗೆ ಏರಿಕೆಯಾಗಿದೆ. ಬೂದುಗುಂಬಳ ಕೆ.ಜಿ.ಗೆ 30 ರೂಪಾಯಿಗೆ ಮಾರಾಟವಾಗುತ್ತಿದೆ. ಮಲ್ಲಿಗೆ ಹೂವಿನ ಬೆಲೆಯೂ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿದೆ. ನಿಂಬೆಹಣ್ಣಿಗೂ ಭಾರಿ ಬೇಡಿಕೆ ಬಂದಿದ್ದು ಬೆಲೆ ಏರಿಕೆಯಾಗಿದೆ. ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ 100 ರೂಪಾಯಿಗೆ ಏರಿಕೆಯಾಗಿದೆ.
ಅಕಾಲಿಕ ಮಳೆಯಿಂದ ಬಾಳೆ ಇಳುವರಿ ಕುಸಿತಗೊಂಡು ಪೂರೈಕೆ ಕಡಿತವಾಗಿದೆ. ಆದರೆ ಸೇಬಿನ ಬೆಲೆ ಇಳಿಕೆಯಾಗಿದ್ದು ಕೆ.ಜಿ.ಗೆ 130ರಿಂದ 150 ರೂಪಾಯಿಗೆ ಮಾರಾಟವಾಗುತ್ತಿದೆ. ಆಯುಧಪೂಜೆ ಹಾಗೂ ವಿಜಯದಶಮಿಗೆ ಕಡ್ಲೆಪುರಿ ಖರೀದಿ ಜೋರಾಗಿ ನಡೆದಿದೆ. ಬಾಳೆಕಂಬ, ಅರಿಶಿನ-ಕುಂಕುಮ ಮತ್ತು ಕರ್ಪೂರ ಬೆಲೆಯೂ ಏರಿಕೆಯಾಗಿದೆ. ಹಬ್ಬದ ಖರೀದಿ ಹೆಚ್ಚಳವಾಗಿದ್ದು ಮಂಗಳವಾರದ ವೇಳೆಗೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.


















