ಬೆಂಗಳೂರು: ಕರ್ನಾಟಕ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಚುರುಕುಗೊಳಿಸಲು ಮತ್ತು ಜವಾಬ್ದಾರಿಯುತವಾಗಿಸಲು ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಕಾಯ್ದೆ-2026 ಅನ್ನು ಜಾರಿಗೆ ತಂದಿದೆ. ಈ ಹೊಸ ತಿದ್ದುಪಡಿಯ ಮೂಲಕ ಸರ್ಕಾರಿ ಸೇವೆಗಳಲ್ಲಿ ವಿಳಂಬ ಮಾಡುವ ಅಧಿಕಾರಿಗಳಿಗೆ ಭಾರಿ ದಂಡ ಹಾಗೂ ದುರುದ್ದೇಶಪೂರಿತ ಸುಳ್ಳು ದೂರುಗಳನ್ನು ದಾಖಲಿಸುವ ನಾಗರಿಕರಿಗೂ ದಂಡ ವಿಧಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.
ಸೇವೆಗಳಲ್ಲಿ ವಿಳಂಬ ಮಾಡಿದರೆ ಅಧಿಕಾರಿಗಳಿಗೆ ದಂಡ
• ನೇರ ವೇತನ ಕಡಿತ: ಸಾರ್ವಜನಿಕರ ಅರ್ಜಿಗಳನ್ನು ವಿಳಂಬ ಮಾಡುವ ಅಥವಾ ತಪ್ಪಾಗಿ ತಿರಸ್ಕರಿಸುವ ಅಧಿಕಾರಿಗಳ ವೇತನದಿಂದಲೇ ದಂಡದ ಹಣವನ್ನು ವಸೂಲಿ ಮಾಡಲಾಗುತ್ತದೆ.
• ದಂಡದ ವಿಧಗಳು: ವಿಳಂಬದ ದಿನಗಳ ಆಧಾರದ ಮೇಲೆ ದಂಡದ ಮೊತ್ತವನ್ನು ದಿನಕ್ಕೆ 20 ರೂ.ನಂತೆ ಆರಂಭಿಸಿ, ದಿನಗಳ ಸಂಖ್ಯೆಗೆ ತಕ್ಕಂತೆ ಹೆಚ್ಚಿಸಲಾಗಿದೆ. ಗರಿಷ್ಠ ದಂಡದ ಮೊತ್ತವನ್ನು1,500 ರೂ.ವರೆಗೆ ನಿಗದಿಪಡಿಸಲಾಗಿದೆ.
• ಉದ್ದೇಶ: ಆಡಳಿತ ಯಂತ್ರದಲ್ಲಿ ನಿರ್ಲಕ್ಷ್ಯವನ್ನು ತಡೆಗಟ್ಟಿ, ಸಾರ್ವಜನಿಕರ ಕೆಲಸಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳುವಂತೆ ಖಚಿತಪಡಿಸುವುದು ಇದರ ಮುಖ್ಯ ಗುರಿಯಾಗಿದೆ.
• ಸುಳ್ಳು ಅಥವಾ ದುರುದ್ದೇಶಪೂರಿತ ದೂರುಗಳಿಗೆ ನಾಗರಿಕರಿಗೂ ದಂಡ
• ದುರುದ್ದೇಶದ ದೂರುಗಳಿಗೆ ಕಡಿವಾಣ: ಕೇವಲ ಅಧಿಕಾರಿಗಳಿಗೆ ತೊಂದರೆ ಕೊಡುವ ಉದ್ದೇಶದಿಂದ ಅಥವಾ ದುರುದ್ದೇಶಪೂರಿತವಾಗಿ ಸುಳ್ಳು ದೂರುಗಳನ್ನು ದಾಖಲಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
• ದಂಡದ ಮೊತ್ತ: ತನಿಖೆಯ ಬಳಿಕ ದೂರು ಸುಳ್ಳು ಅಥವಾ ದುರುದ್ದೇಶಪೂರಿತ ಎಂದು ಸಾಬೀತಾದರೆ, ಅಂತಹ ಅರ್ಜಿದಾರರಿಗೆ ಪ್ರತಿ ಅರ್ಜಿಗೆ 1,500 ದಂಡ ರೂ. ವಿಧಿಸಲಾಗುತ್ತದೆ.
• ಪುನರಾವರ್ತನೆಗೆ ದಂಡ: ಇದೇ ತಪ್ಪನ್ನು ಪುನರಾವರ್ತಿಸಿದರೆ ಪ್ರತಿ ಬಾರಿ ದಂಡದ ಮೊತ್ತವನ್ನು ವಿಧಿಸಲಾಗುವುದು. ಈ ದಂಡದ ಹಣವನ್ನು ಭೂ ಕಂದಾಯ ಹಿಂಬಾಕಿಯಂತೆ ವಸೂಲಿ ಮಾಡಲಾಗುತ್ತದೆ.
• ನ್ಯಾಯಯುತ ಅವಕಾಶ: ದಂಡ ವಿಧಿಸುವ ಮೊದಲು ನಾಗರಿಕರಿಗೆ ತಮ್ಮ ಸ್ಪಷ್ಟನೆ ಹಾಗೂ ಅಹವಾಲುಗಳನ್ನು ಮಂಡಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ:ಆನ್ ಲೈನ್ ಮೂಲಕವೇ 2 ಗಂಟೆಯಲ್ಲಿ ಫಾಸ್ಟ್ಯಾಗ್ ಪಾಸ್ ಆ್ಯಕ್ಟಿವೇಷನ್: ಹೀಗೆ ಮಾಡಿ



















