ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ (ರೇಷನ್ ಕಾರ್ಡ್) ಹೊಂದಿರುವವರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ಗಡುವನ್ನು ಸರ್ಕಾರವು ನವೆಂಬರ್ 10ರವರೆಗೆ ವಿಸ್ತರಣೆ ಮಾಡಿದೆ. ಇದುವರೆಗೆ ಅಕ್ಟೋಬರ್ 20 ಇ-ಕೆವೈಸಿ ಮಾಡಲು ಕೊನೆಯ ದಿನವಾಗಿತ್ತು. ಇನ್ನೂ ಲಕ್ಷಾಂತರ ಜನ ಪ್ರಕ್ರಿಯೆ ಪೂರ್ಣಗೊಳಿಸದ ಕಾರಣ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.
ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು “ಅನ್ನ ಸೇವೆ’’ ಎಂಬ ಆ್ಯಪ್ ಅನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ ರಾಜ್ಯಾದ್ಯಂತ ಜನರು ಅನ್ನ ಸೇವೆ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆಯನ್ನು ಮುಗಿಸಬಹುದು. ನವೆಂಬರ್ 10ರವರೆಗೆ ಅವಕಾಶವಿದ್ದರೂ ಅನಗತ್ಯ ಗೊಂದಲ, ಸರ್ವರ್ ಸಮಸ್ಯೆಯನ್ನು ತಪ್ಪಿಸಲು ಜನ ಈಗಲೇ ಪ್ರಕ್ರಿಯೆ ಮುಗಿಸುವುದು ಒಳಿತು.
ಮನೆಯಲ್ಲೇ ಇ-ಕೆವೈಸಿ ಮಾಡುವುದು ಹೇಗೆ?
• ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ನಿಂದ ‘ಅನ್ನ ಸೇವೆ’ ಆ್ಯಪ್ ಮತ್ತು ಆಧಾರ್ ಮುಖ ದೃಢೀಕರಣಕ್ಕಾಗಿ ‘AadhaarFaceRD’ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
• ಆ್ಯಪ್ ಓಪನ್ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ ಮೂಲಕ ಹಾಕಿ ಲಾಗಿನ್ ಆಗಿ.
• ನಿಮ್ಮ ರೇಷನ್ ಕಾರ್ಡ್ ವಿವರ ಅಂದರೆ, ಆರ್ ಸಿ ಸಂಖ್ಯೆ ನಮೂದಿಸಿ
• ಪಡಿತರ ಚೀಟಿಯಲ್ಲಿರುವ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು ಕಾಣುತ್ತವೆ
• ಯಾರ ಹೆಸರಿನಲ್ಲಿ ಇ-ಕೆವೈಸಿ ಆಗಿಲ್ಲವೋ, ಅವರ ಹೆಸರಿನ ಮುಂದಿರುವ ‘ಇ-ಕೆವೈಸಿ’ ಆಪ್ಶನ್ ಮೇಲೆ ಕ್ಲಿಕ್ ಮಾಡಿ
• ಆಧಾರ್ ಫೇಸ್ ಅಥೆಂಟಿಫಿಕೇಷನ್ ಆರ್ ಡಿ ಆ್ಯಪ್ ಮೂಲಕ ಮುಖ ದೃಢೀಕರಣ ಮಾಡಿಕೊಳ್ಳಿ.
• ಮುಖದ ದೃಢೀಕರಣ ಸರಿಯಾಗಿ ಮ್ಯಾಚ್ ಆದ ತಕ್ಷಣ e-KYC Successful ಎಂಬ ಸಂದೇಶ ಬರುತ್ತದೆ. ಆಗ ಇಡೀ ಪ್ರಕ್ರಿಯೆ ಮುಗಿಯುತ್ತದೆ.
ಇದನ್ನೂ ಓದಿ:ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ರೈಲ್ವೆ ನೇಮಕಾತಿ ವಯೋಮಿತಿಯಲ್ಲಿ ಮಹತ್ವದ ಬದಲಾವಣೆ


















