ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಅನುಕೂಲವಾಗುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ‘ಫಾಸ್ಟ್ಯಾಗ್ ವಾರ್ಷಿಕ ಪಾಸ್’ (FASTag Annual Pass) ಜಾರಿಗೆ ತಂದಿದೆ. ಈ ಪಾಸ್ ಪಡೆದುಕೊಳ್ಳುವುದರಿಂದ ವಾಹನ ಸವಾರರು ವರ್ಷವಿಡೀ ಟೋಲ್ ಶುಲ್ಕದಲ್ಲಿ ಹೆಚ್ಚಿನ ಹಣವನ್ನು ಉಳಿಸಬಹುದಾಗಿದೆ. ಹಾಗೆಯೇ, ಈಗ ಆನ್ ಲೈನ್ ಮೂಲಕವೂ ಪಾಸ್ ಪಡೆಯಬಹುದು.
ಏನಿದು ಫಾಸ್ಟ್ಯಾಗ್ ವಾರ್ಷಿಕ ಪಾಸ್?
ಖಾಸಗಿ ಕಾರು, ಜೀಪ್ ಮತ್ತು ವ್ಯಾನ್ ಮಾಲೀಕರಿಗಾಗಿ ಪ್ರಾಧಿಕಾರವು ಈ ವಾರ್ಷಿಕ ಪಾಸ್ ಸೌಲಭ್ಯವನ್ನು ನೀಡುತ್ತಿದೆ. ಈ ಪಾಸ್ ಮೂಲಕ ವರ್ಷಕ್ಕೆ ಅಥವಾ ಗರಿಷ್ಠ 200 ಟೋಲ್ ಗಳನ್ನು ಉಚಿತವಾಗಿ ದಾಟಬಹುದು. ಈ ಪಾಸಿನ ಶುಲ್ಕ 3,075 ರೂಪಾಯಿ ಆಗಿದೆ. ಪಾವತಿ ಮಾಡಿದ ದಿನದಿಂದ 1 ವರ್ಷ ಅಥವಾ 200 ಟ್ರಿಪ್ ಗಳು (ಯಾವುದು ಮೊದಲೋ ಅದು) ಮುಗಿಯುವವರೆಗೆ ಇದು ಮಾನ್ಯವಾಗಿರುತ್ತದೆ.
ಈ ಪಾಸ್ ಕೇವಲ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳ ಟೋಲ್ ಪ್ಲಾಜಾಗಳಿಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯ ಹೆದ್ದಾರಿಗಳು ಹಾಗೂ ಕಮರ್ಷಿಯಲ್ ವಾಹನಗಳಿಗೆ ಇದು ಅನ್ವಯಿಸುವುದಿಲ್ಲ. ನಿಮ್ಮ ವಾಹನದ ವಿಂಡ್ ಸ್ಕ್ರೀನ್ ಗೆ ಈಗಾಗಲೇ ಅಂಟಿಸಿರುವ ಚಾಲ್ತಿಯಲ್ಲಿರುವ ಫಾಸ್ಟ್ಯಾಗ್ ನಲ್ಲೇ ಈ ವಾರ್ಷಿಕ ಪಾಸ್ ಸೌಲಭ್ಯವನ್ನು ಆ್ಯಕ್ಟಿವೇಟ್ ಮಾಡಬಹುದು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
• ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ ನಿಂದ ‘Rajmargyatra’ ಆ್ಯಪ್ ಡೌನ್ ಲೋಡ್ ಮಾಡಿ ಅಥವಾ NHAI ವೆಬ್ಸೈಟ್ಗೆ ಭೇಟಿ ನೀಡಿ.
• ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ ಮೂಲಕ ಲಾಗಿನ್ ಆಗಿ.
• ‘Annual Pass’ ಅಥವಾ ‘Book Pass’ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು (Vehicle Number – VRN) ನಮೂದಿಸಿ ಅರ್ಹತೆಯನ್ನು ಪರಿಶೀಲಿಸಿ.
• ವಾಹನದ ಆರ್ ಸಿ ಮತ್ತು ಅಗತ್ಯ ವಿವರಗಳನ್ನು ಅಪ್ಲೋಡ್ ಮಾಡಿ, 3,075 ರೂಪಾಯಿ ಶುಲ್ಕವನ್ನು ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ. (ಫಾಸ್ಟ್ಯಾಗ್ ವ್ಯಾಲೆಟ್ ಹಣದಿಂದ ಪಾವತಿಸಲು ಬರುವುದಿಲ್ಲ).
• ಪಾವತಿ ಯಶಸ್ವಿಯಾದ 2 ಗಂಟೆಗಳಲ್ಲಿ ನಿಮ್ಮ ಫಾಸ್ಟ್ಯಾಗ್ ನಲ್ಲಿ ವಾರ್ಷಿಕ ಪಾಸ್ ಸಕ್ರಿಯಗೊಳ್ಳುತ್ತದೆ.
ಇದನ್ನೂ ಓದಿ:ನವೆಂಬರ್ 1ರಿಂದ ವಂಚಕರಿಗೆ ಕಡಿವಾಣ: ಇನ್ ಕಮಿಂಗ್ ಕರೆ ನಿಯಮಗಳಲ್ಲಿ ಭಾರಿ ಬದಲಾವಣೆ


















