ಅಹಮದಾಬಾದ್/ದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಪ್ರವಚನಗಳನ್ನು ನೀಡುತ್ತಾ ಪ್ರಸಿದ್ಧನಾಗಿದ್ದ ದೆಹಲಿ ಮೂಲದ 27 ವರ್ಷದ ವ್ಯಕ್ತಿಯೊಬ್ಬ, ತನ್ನ ಸ್ನೇಹದ ಪ್ರಸ್ತಾಪವನ್ನು ತಿರಸ್ಕರಿಸಿದ ಯುವತಿ ಮತ್ತು ಆಕೆಯ ತಾಯಿಯ ಫೋಟೋಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಮಾರ್ಪಡಿಸಿ ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಈ ಡಿಜಿಟಲ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸುಮಿತ್ ನೇಮಚಂದ್ ಶರ್ಮನನ್ನು ಅಹಮದಾಬಾದ್ ನಗರ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಮಹಿಳೆಯರನ್ನು ಆನ್‌ಲೈನ್ ದೌರ್ಜನ್ಯದಿಂದ ರಕ್ಷಿಸುವ ಸಲುವಾಗಿ ಪೊಲೀಸರು ಆರಂಭಿಸಿರುವ ‘ಮಿಷನ್ ಸೈಬರ್ ರಕ್ಷಿಕಾ: #SecureHerSpace’ ಅಭಿಯಾನದ ಅಡಿಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ.
ಧಾರ್ಮಿಕ ಚರ್ಚೆಯ ಸೋಗಿನಲ್ಲಿ ಶುರುವಾದ ಕಿರುಕುಳ
ಗುಜರಾತ್ ಮೂಲದ ಸಂತ್ರಸ್ತ ಯುವತಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಆರೋಪಿ ಸುಮಿತ್ ಶರ್ಮಾ, ಆರಂಭದಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುತ್ತಾ ಆಕೆಗೆ ಹತ್ತಿರವಾಗಲು ಯತ್ನಿಸಿದ್ದಾನೆ. ಆದರೆ, ದಿನಕಳೆದಂತೆ ಆಕೆಯೊಂದಿಗೆ ಸ್ನೇಹ ಬೆಳೆಸಲು ಮುಂದಾದಾಗ ಯುವತಿ ಆತನ ಪ್ರಸ್ತಾಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾಳೆ. ಇದರಿಂದ ತೀವ್ರ ಅಸಮಾಧಾನಗೊಂಡ ಆರೋಪಿ, 2025ರ ಡಿಸೆಂಬರ್‌ನಿಂದ 2026ರ ಏಪ್ರಿಲ್ 6ರ ಅವಧಿಯಲ್ಲಿ ಇಂಟರ್ನೆಟ್‌ನಾದ್ಯಂತ ಯುವತಿಯನ್ನು ನಿರಂತರವಾಗಿ ಸ್ಟಾಕಿಂಗ್ (ಹಿಂಬಾಲಿಸುವುದು) ಮಾಡಲಾರಂಭಿಸಿದ್ದಾನೆ.
ಅಲ್ಲದೆ ಸಂತ್ರಸ್ತೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಆಕೆ ಮತ್ತು ಆಕೆಯ ತಾಯಿಯ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡ ಆರೋಪಿ, ಗೂಗಲ್‌ನಲ್ಲಿ ಬಟ್ಟೆಗಳನ್ನು ತೆಗೆದುಹಾಕುವ ಎಐ ಪರಿಕರಗಳ (AI Remove Clothes Tools) ಬಗ್ಗೆ ಹುಡುಕಾಟ ನಡೆಸಿದ್ದಾನೆ. ಅಂತರ್ಜಾಲದಲ್ಲಿ ಸುಲಭವಾಗಿ ಸಿಗುವ ಇಂತಹ ಸೈಟ್‌ಗಳಿಗೆ ಆ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ನೂರಕ್ಕೂ ಹೆಚ್ಚು ನಗ್ನ ಹಾಗೂ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಸೃಷ್ಟಿಸಿದ್ದಾನೆ. ಇಷ್ಟಕ್ಕೇ ನಿಲ್ಲದ ಆತ, ಯುವತಿಯ ಹೆಸರಿನಲ್ಲೇ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್ ಒಳಗೊಂಡಂತೆ ಸುಮಾರು 8 ರಿಂದ 10 ನಕಲಿ ಖಾತೆಗಳನ್ನು ತೆರೆದಿದ್ದಾನೆ. ಈ ಖಾತೆಗಳಲ್ಲಿ ಆ ಎಐ ಸೃಷ್ಟಿತ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಿ, ಸಮಾಜದಲ್ಲಿ ಆ ಕುಟುಂಬದ ಮಾನಹಾನಿ ಮಾಡುವಂತಹ ಅತ್ಯಂತ ಅಸಭ್ಯ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಲ್ಲಿ ಸೈಬರ್ ಪೊಲೀಸರ ಮಿಂಚಿನ ಕಾರ್ಯಾಚರಣೆ
ತಮ್ಮ ವಿರುದ್ಧ ಡಿಜಿಟಲ್ ಜಗತ್ತಿನಲ್ಲಿ ನಡೆಯುತ್ತಿದ್ದ ಈ ಭೀಕರ ದೌರ್ಜನ್ಯದ ವಿರುದ್ಧ ಸಂತ್ರಸ್ತೆ ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದರು. ಮೇ ಮೊದಲ ವಾರದಲ್ಲಿ ಎಫ್‌ಐಆರ್ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಎಂ.ಎಚ್. ಭೇಟರಿಯಾ ನೇತೃತ್ವದ ತನಿಖಾ ತಂಡ, ಡಿಜಿಟಲ್ ಟ್ರ್ಯಾಕಿಂಗ್ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯ ಹೆಜ್ಜೆಯನ್ನು ಪತ್ತೆಹಚ್ಚಿದೆ. ಈ ತನಿಖೆಯು ಈಶಾನ್ಯ ದೆಹಲಿಯ ಉಸ್ಮಾನ್‌ಪುರಕ್ಕೆ ತಲುಪಿದ್ದು, ಆರೋಪಿ ಸುಮಿತ್ ಶರ್ಮನ ಇರುವಿಕೆ ಅರಿತ ಪೊಲೀಸರು ಅಲ್ಲಿ ದಾಳಿ ನಡೆಸಿ ಆತನ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಕಠಿಣ ಪ್ರಕರಣಗಳನ್ನು ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಭೀಕರ ಬಿಸಿಲಿಗೆ ಮರಗಳಿಂದ ಉದುರಿ ಬಿದ್ದು ಪ್ರಾಣಬಿಟ್ಟ 700ಕ್ಕೂ ಹೆಚ್ಚು ಬಾವಲಿ, ಪಕ್ಷಿಗಳು!



















