ಅಯೋಧ್ಯ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಕಾಣಿಕೆ ಕಳವು ಮತ್ತು ಹಣ ದುರುಪಯೋಗದ ಹಗರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಮಹತ್ತರ ತಿರುವು ಸಿಕ್ಕಿದೆ. ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿಯಾದ ಮಹಂತ್ ಕಮಲ್ ನಯನ್ ದಾಸ್ ಅವರು ಭಾನುವಾರ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ (VHP) ಹಿರಿಯ ನಾಯಕರಾಗಿರುವ ಚಂಪತ್ ರಾಯ್ ಅವರು ಸಂಪೂರ್ಣ ನಿರಪರಾಧಿಯಾಗಿದ್ದು, ಅವರಿಗೆ ಆಪ್ತರೇ ‘ದ್ರೋಹ’ ಎಸಗಿದ್ದಾರೆ ಎಂದು ಮಹಂತ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಮಹಂತ್ ಕಮಲ್ ನಯನ್ ದಾಸ್, ಚಂಪತ್ ರಾಯ್ ಅವರ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಚಂಪತ್ ರಾಯ್ ಅವರಿಗೆ ಮೋಸ ಮಾಡಲಾಗಿದೆ. ಅವರು ತಮ್ಮ ಇಡೀ ಜೀವನವನ್ನು ದೇಶ, ಸಮಾಜ ಮತ್ತು ಶ್ರೀರಾಮ ಜನ್ಮಭೂಮಿಗಾಗಿ ಮುಡುಪಾಗಿಟ್ಟಿದ್ದಾರೆ. ಇಂದಿನವರೆಗೂ ಅವರ ಚಾರಿತ್ರ್ಯದಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ. ಅವರು ಸಂಪೂರ್ಣ ನಿರಪರಾಧಿಯಾಗಿದ್ದು, ಈ ಪ್ರಕರಣದಲ್ಲಿ ಅವರನ್ನು ಸಿಲುಕಿಸಿ ವಂಚಿಸಲಾಗಿದೆ” ಎಂದು ಮಹಂತ್ ಹೇಳಿದ್ದಾರೆ. ಇದೇ ವೇಳೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತಮಗೆ ಪೂರ್ಣ ನಂಬಿಕೆಯಿದ್ದು, ತನಿಖೆಯಲ್ಲಿ ಸೂಕ್ತ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಹಣ ದುರುಪಯೋಗವಾಗಿರುವ ಕುರಿತ ತನಿಖೆಗಾಗಿ ರಚನೆಯಾಗಿರುವ ವಿಶೇಷ ತನಿಖಾ ತಂಡ (SIT) ಸದ್ಯ ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಬಂಧಿಸಲಾಗಿದ್ದು, ಅವರಿಂದ ಭಾರಿ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ಕಾಣಿಕೆ ಪೆಟ್ಟಿಗೆಯ ಕೀಲಿ ಕೈಗಳು ಅನಧಿಕೃತವಾಗಿ ಸಿಕ್ಕಿದ್ದವು ಎಂಬ ಪ್ರಮುಖ ಲೋಪವನ್ನು ಎಸ್‌ಐಟಿ ಪ್ರಾಥಮಿಕ ತನಿಖೆ ಪತ್ತೆಹಚ್ಚಿದೆ. ಈ ವಿವಾದದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಟ್ರಸ್ಟ್ ಆ ರಾಜೀನಾಮೆಗಳನ್ನು ಅಂಗೀಕರಿಸಿದೆ. ಸದ್ಯ ಬಜರಂಗ್ ಬಾಗ್ರಾ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು, ಆಡಳಿತ ಸುಧಾರಣೆಗಾಗಿ ಹೊಸದಾಗಿ ಸಿಇಒ ಹುದ್ದೆಯನ್ನು ಸೃಷ್ಟಿಸಲಾಗಿದೆ.
ವರದಿಯ ಬಳಿಕವೇ ಪ್ರತಿಕ್ರಿಯೆ ಎಂದ ರಾಯ್
ತಮ್ಮ ಮೇಲಿನ ಆರೋಪಗಳ ಕುರಿತು ಇತ್ತೀಚೆಗಷ್ಟೇ ಮೌನ ಮುರಿದಿದ್ದ ಚಂಪತ್ ರಾಯ್, ಇವೆಲ್ಲವೂ ತಳಹದಿಯಿಲ್ಲದ ಸುಳ್ಳು ಆರೋಪಗಳು ಎಂದು ತಳ್ಳಿಹಾಕಿದ್ದರು. ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ ನಂತರವೇ ತಾವು ಪ್ರತಿಯೊಂದು ಆರೋಪಕ್ಕೂ ಅಧಿಕೃತವಾಗಿ ಮತ್ತು ವಿಸ್ತಾರವಾಗಿ ಪ್ರತಿಕ್ರಿಯಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ತನಿಖೆ ಪೂರ್ಣಗೊಂಡ ತಕ್ಷಣ ಸತ್ಯ ಏನೆಂಬುದು ಇಡೀ ದೇಶದ ಮುಂದೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಕ್ಷಣಾ ವಲಯದಲ್ಲಿ ಐತಿಹಾಸಿಕ ಹೆಜ್ಜೆ : ಭಾರತದಲ್ಲಿನ್ನು ಕ್ಷಿಪಣಿ ನಿರ್ಮಾಣಕ್ಕೆ ಖಾಸಗಿ ಕಂಪನಿಗಳಿಗೆ ಮುಕ್ತ ಅವಕಾಶ!



















