ಬೆಂಗಳೂರು : ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ಬಿಡುಗಡೆ ಮಾಡಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿರುವ ಕುರಿತು ಕೆಪಿಸಿಸಿ ಕಚೇರಿ ಆವರಣದಲ್ಲಿ ಮಾತನಾಡಿದ ಶಿವಕುಮಾರ್, “ನಸೀರ್ ಅವರಿಗೆ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹೋಗಿ ಬಂಡಾಯ ಅಭ್ಯರ್ಥಿ ಹಿಂದೆ ಸರಿಯುವಂತೆ ಮಾಡಬೇಕು ಎಂದು ಪಕ್ಷ ಸೂಚಿಸಿತ್ತು. ಅವರು ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲಿ ಏನಾಗಿದೆ ಎಂದು ನನಗೆ ಇನ್ನು ವರದಿ ಬರಬೇಕಿದೆ” ಎಂದಿದ್ದಾರೆ.
ಯಾವುದೇ ಪಕ್ಷವಾದರೂ ಶಿಸ್ತು ಬಹಳ ಮುಖ್ಯ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡೇ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ನಂತರ ನಾವು ಎಲ್ಲಾ ನಾಯಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆವು. ನಮ್ಮ ನಾಯಕರ ವರದಿಗಳ ಆಧಾರದ ಮೇಲೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನೀವು ಶಾಸಕರನ್ನು ಒಬ್ಬೊಬ್ಬರನ್ನೇ ಕರೆದು ಚರ್ಚೆ ಮಾಡುತ್ತಿದ್ದೀರಿ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ರಾಜಕಾರಣ ಮಾಡುವಾಗ ನಾವು ನಮ್ಮ ಶಾಸಕರ ಜತೆ ಚರ್ಚೆ ಮಾಡಿ ಭವಿಷ್ಯ ರೂಪಿಸುವ ಬಗ್ಗೆ ಚರ್ಚೆ ಮಾಡಬೇಕಲ್ಲವೇ. ಯಾರಿಗೆ ಏನು ಹೇಳಬೇಕು, ಯಾರಿಗೆ ಯಾವ ಮಾರ್ಗದರ್ಶನ ನೀಡಬೇಕೋ ಮಾಡುತ್ತೇವೆ. ಪಾಲಿಕೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ. ನಾನು ಈ ಕೆಲಸ ಮಾಡದೇ ಬೇರೆ ಯಾರು ಮಾಡುತ್ತಾರೆ? ಇನ್ನು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಏನಾಗಿದೆ ಎಂದು ಶಾಸಕರು ವರದಿ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಶಾಸಕರು ದೆಹಲಿಗೆ ಹೋಗಿರುವುದು, ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅವರು ತಮ್ಮ ಬೇಡಿಕೆ ಕೇಳಲಿ. ಆದರೆ ಪಕ್ಷಕ್ಕೆ ಶಿಸ್ತಿನಿಂದ ಇರಬೇಕು ಅಷ್ಟೇ. ಅವರೆಲ್ಲರೂ ನಮ್ಮ ಸಹೋದ್ಯೋಗಿಗಳು. ಹೀಗಾಗಿ ಅವರಿಗೆ ಶಿಸ್ತು ಕಾಪಾಡುವಂತೆ ಮನವಿ ಮಾಡಿದ್ದೇನೆ. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ನಮಗೂ ಸಚಿವ ಸ್ಥಾನ ಕೊಟ್ಟರೆ ಜನ ಸೇವೆ ಮಾಡ್ಲಿಕೆ ಆಗುತ್ತೆ : ಶಾಸಕ ಆಸೀಫ್ ಸೇಠ್



















