ಬೆಂಗಳೂರು : ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಪಾತ್ರದ ಕುರಿತು ತನಿಖೆ ತೀವ್ರಗೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಸಂದರ್ಶನದಲ್ಲಿ ಅಕ್ರಮ ಸೇರಿದಂತೆ ಹಲವು ಆರೋಪಗಳು ತನಿಖೆಯಲ್ಲಿ ಬಯಲಾಗುತ್ತಿವೆ ಎನ್ನಲಾಗಿದೆ. ಶಿವಶಂಕರಪ್ಪ ಹಾಗೂ ಜ್ಞಾನೇಂದ್ರ ಕುಮಾರ್ ಅವರ ಹಿಂದೆಯೂ ದೊಡ್ಡವರ ಕೈವಾಡ ಇದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಕೆಲವು ಅಭ್ಯರ್ಥಿಗಳಿಂದ ಸುಮಾರು 80 ಲಕ್ಷ ರೂಪಾಯಿವರೆಗೆ ಡೀಲ್ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಣವನ್ನು ಜ್ಞಾನೇಂದ್ರ ಕುಮಾರ್ ಯಾರಿಗೆ ನೀಡಿದ್ದಾರೆ, ಹಣದ ಜಾಲ ಎಲ್ಲಿಯವರೆಗೆ ವ್ಯಾಪಿಸಿದೆ ಎಂಬ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರಾಜಕಾರಣಿಗಳ ಅಣತಿಯಂತೆ ಅಕ್ರಮ ನಡೆಯುತ್ತಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ತನಿಖಾಧಿಕಾರಿಗಳು ಕೆಪಿಎಸ್ಸಿ ಕಚೇರಿಯಲ್ಲಿ ಸ್ಥಳ ಮಹಜರು ನಡೆಸಿದ್ದು, ಮೂರು ಹಂತಗಳಲ್ಲಿ ಡೀಲ್ ನಡೆಸಿ ಅಕ್ರಮ ಎಸಗಲಾಗುತ್ತಿತ್ತೇ ಎಂಬ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಡೀಲ್ ಮಾಡಿಕೊಂಡ ಕೆಲವು ಅಭ್ಯರ್ಥಿಗಳು ಪರೀಕ್ಷೆಯನ್ನು ಸರಿಯಾಗಿ ಬರೆಯದಿದ್ದರೂ, ಅವರ ಒಎಂಆರ್ ಶೀಟ್‌ಗಳನ್ನು ತಿದ್ದಲಾಗುತ್ತಿತ್ತು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಪಶುವೈದ್ಯಾಧಿಕಾರಿ ಅಭ್ಯರ್ಥಿಗಳಿಗೆ ಬಿಗ್ ಶಾಕ್?
ಇದೇ ವೇಳೆ 400 ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೆಪಿಎಸ್ಸಿ ನೇಮಕಾತಿ ಅಕ್ರಮದ ಕುರಿತು ಚರ್ಚೆಯಾಗುವ ಸಾಧ್ಯತೆ ಇದ್ದು, ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ನೇಮಕಾತಿಯನ್ನು ರದ್ದುಪಡಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳುತ್ತಾ ಎಂಬ ಕುತೂಹಲ ಮೂಡಿದೆ.
ಈ ಹಿಂದೆ ಪಿಎಸ್‌ಐ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳನ್ನು ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿತ್ತು. ಇದೀಗ ಪಶುವೈದ್ಯಾಧಿಕಾರಿ ನೇಮಕಾತಿಗೂ ಅದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತಾ ಎಂಬ ಆತಂಕ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ. ಜ್ಞಾನೇಂದ್ರ ಕುಮಾರ್ ತನಿಖೆ ವೇಳೆ ದೊಡ್ಡವರ ಕೈವಾಡದ ಬಗ್ಗೆ ಬಾಯಿ ಬಿಡುತ್ತಾರಾ ಎಂಬುದು ಪ್ರಕರಣದ ಮುಂದಿನ ಮಹತ್ವದ ಪ್ರಶ್ನೆಯಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಅಧಿಕಾರಿಗಳ ಭರ್ಜರಿ ರೇಡ್ ; ಪಿಒಪಿ ಗಣೇಶ ಗೋಡೌನ್ ಸೀಜ್, 700ಕ್ಕೂ ಹೆಚ್ಚು ಮೂರ್ತಿಗಳು ವಶಕ್ಕೆ!


















