ಕಣ್ಣೂರು : ಕೇರಳದ ಕಣ್ಣೂರಿನಲ್ಲಿ ಸಿನಿಮಾಗಳನ್ನೂ ಮೀರಿಸುವಂತಹ ವಿಚಿತ್ರ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖದೀಮನೊಬ್ಬ ನೇರವಾಗಿ ಪೊಲೀಸ್ ಠಾಣೆಯ ಆವರಣಕ್ಕೇ ನುಗ್ಗಿ, ಅಲ್ಲಿಂದಲೇ ಪೊಲೀಸ್ ವಾಹನವೊಂದನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಕೇವಲ ವಾಹನ ಕದ್ದಿದ್ದಷ್ಟೇ ಅಲ್ಲದೇ, ಅದೇ ವಾಹನದಲ್ಲಿ ಪೆಟ್ರೋಲ್ ಬಂಕ್‌ಗೆ ತೆರಳಿ ಇಂಧನ ತುಂಬಿಸಿಕೊಂಡು ಬಳಿಕ ತಡರಾತ್ರಿಯ ಸ್ನ್ಯಾಕ್ಸ್ ಸವಿಯಲು ಹೋಟೆಲ್‌ಗೆ ಹೋದಾಗ ಈತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಧ್ಯರಾತ್ರಿ ನಡೆದ ಕೃತ್ಯ
ಬಂಧಿತ ಆರೋಪಿಯನ್ನು ತ್ರಿಶೂರ್ ಜಿಲ್ಲೆಯ ಗುರುವಾಯೂರು ಬಳಿಯ ತೋಳಿಯೂರು ಮೂಲದ 49 ವರ್ಷದ ಹಂಸತ್ ಎಂದು ಗುರುತಿಸಲಾಗಿದೆ. ಪೊಲೀಸ್ ವರದಿಗಳ ಪ್ರಕಾರ, ಮಧ್ಯರಾತ್ರಿ ಸುಮಾರು 12:30ರ ಸುಮಾರಿಗೆ ಕಣ್ಣೂರು ಸಿಟಿ ಸೈಬರ್ ಪೊಲೀಸ್ ಠಾಣೆಯ ಆವರಣವನ್ನು ಪ್ರವೇಶಿಸಿದ ಈತ, ಸುತ್ತಮುತ್ತಲಿನ ಪರಿಸ್ಥಿತಿಯನ್ನು ಮೊದಲಿಗೆ ಸೂಕ್ಷ್ಮವಾಗಿ ಗಮನಿಸಿದ್ದಾನೆ. ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಅದೇ ಠಾಣೆಗೆ ಸೇರಿದ ಎಸ್‌ಯುವಿ (SUV) ವಾಹನವನ್ನು ಚಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ.
ಪೆಟ್ರೋಲ್ ಹಾಕಿಸಿ, ಹೋಟೆಲ್‌ಗೆ ಭೇಟಿ
ಠಾಣೆಯಿಂದ ವಾಹನವನ್ನು ಕದ್ದೊಯ್ದ ಆರೋಪಿ, ನೇರವಾಗಿ ಪೊಲೀಸ್ ವಾಹನಗಳು ಸಾಮಾನ್ಯವಾಗಿ ಇಂಧನ ತುಂಬಿಸುವ ಪೆಟ್ರೋಲ್ ಬಂಕ್‌ಗೆ ತೆರಳಿದ್ದಾನೆ. ಅಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು, ಬಿಲ್ ಪಾವತಿಸದೆಯೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆ ಬಳಿಕ ತಡರಾತ್ರಿಯೂ ತೆರೆದಿರುವಂಥ ಹೋಟೆಲ್‌ವೊಂದಕ್ಕೆ ತೆರಳಿ ತಿಂಡಿ ತಿನ್ನಲು ಮುಂದಾಗಿದ್ದಾನೆ. ಈ ವೇಳೆ ಆತನ ವರ್ತನೆಯನ್ನು ಗಮನಿಸಿದ ಅಲ್ಲಿದ್ದ ಜನರಿಗೆ ಅನುಮಾನ ಬಂದಿದೆ. ತಕ್ಷಣವೇ ಅವರು ಎಚ್ಚೆತ್ತುಕೊಂಡು ಕಣ್ಣೂರು ಟೌನ್ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಸಾರ್ವಜನಿಕರ ಕರೆಗೆ ಸ್ಪಂದಿಸಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ತಂಡ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ವೇಳೆ ಆತ ತಂದಿದ್ದ ವಾಹನವು ಕಣ್ಣೂರು ಸೈಬರ್ ಪೊಲೀಸ್ ಠಾಣೆಯಿಂದ ಕದ್ದಿರುವ ವಾಹನ ಎಂಬ ಸತ್ಯ ಬಾಯಿಬಿಟ್ಟಿದ್ದಾನೆ. ತಕ್ಷಣವೇ ಆರೋಪಿ ಹಂಸತ್‌ನನ್ನು ಬಂಧಿಸಿದ ಪೊಲೀಸರು, ಆತನ ವಿರುದ್ಧ ಸರ್ಕಾರಿ ಆಸ್ತಿ ಕಳ್ಳತನದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳುವಾಗಿದ್ದ ವಾಹನವನ್ನು ಮರಳಿ ಸೈಬರ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯು ಈ ಹಿಂದೆಯೂ ಇಂತಹ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಹಿನ್ನೆಲೆ ಪರಿಶೀಲಿಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ‘ಮಿನಾಬ್ ದಾಳಿಯಲ್ಲಿ ಮಡಿದ ಮಕ್ಕಳ ಅಮ್ಮಂದಿರೂ ನೆನಪಾಗಲಿ’ | US ಮಾಧ್ಯಮ ಕಾರ್ಯದರ್ಶಿಗೆ ಇರಾನ್ ಹೀಗೆ ಹೇಳಿದ್ದೇಕೆ?



















