ವಾಷಿಂಗ್ಟನ್ : ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಎರಡನೇ ಮಗುವಿನ ಜನ್ಮ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಇರಾನ್ ಕೂಡ ಶುಭಾಶಯ ಸಂದೇಶವನ್ನು ಕಳುಹಿಸಿದೆ. ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡು, ಕಳೆದ ಫೆಬ್ರವರಿಯಲ್ಲಿ ಇರಾನ್‌ನ ಮಿನಾಬ್ ಶಾಲೆಯ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟ ನೂರಾರು ಮಕ್ಕಳ ಕುರಿತು ನೆನಪಿಸುವ ಮೂಲಕ ತೀಕ್ಷ್ಣ ತಿರುಗೇಟನ್ನೂ ನೀಡಿದೆ.
ಶ್ವೇತಭವನದ ಇತಿಹಾಸದಲ್ಲೇ ಅತ್ಯಂತ ಕಿರಿಯ ಪತ್ರಿಕಾ ಕಾರ್ಯದರ್ಶಿ (28 ವರ್ಷ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕ್ಯಾರೋಲಿನ್ ಲೀವಿಟ್, ಗುರುವಾರ ತಮ್ಮ ಎರಡನೇ ಮಗು ‘ವಿವಿಯಾನಾ’ ಜನಿಸಿರುವ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಸ ಹಂಚಿಕೊಂಡಿದ್ದರು. “ಮೇ 1ರಂದು ವಿವಿಯಾನಾ ನಮ್ಮ ಕುಟುಂಬವನ್ನು ಸೇರಿದ್ದಾಳೆ. ಮಗುವಿನ ಆಗಮನದಿಂದ ನಮ್ಮ ಹೃದಯ ಪ್ರೀತಿಯಿಂದ ತುಂಬಿಹೋಗಿದೆ,” ಎಂದು ಮಗುವನ್ನು ಎತ್ತಿಕೊಂಡಿರುವ ಫೋಟೋ ಸಮೇತ ಅವರು ಬರೆದುಕೊಂಡಿದ್ದರು.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು, ಲೀವಿಟ್ ಅವರಿಗೆ ಶುಭಾಶಯ ತಿಳಿಸುವ ಜೊತೆಗೇ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಖಂಡಿಸಿದೆ. “ನಿಮಗೆ ಅಭಿನಂದನೆಗಳು. ಮಕ್ಕಳು ಯಾವತ್ತೂ ಮುಗ್ಧರು ಹಾಗೂ ಮುದ್ದು. ಆದರೆ, ಮಿನಾಬ್ ಶಾಲೆಯಲ್ಲಿ ನಿಮ್ಮ ಬಾಸ್(ಟ್ರಂಪ್) ಕೊಂದ, ಮತ್ತು ನೀವು ಸಮರ್ಥಿಸಿಕೊಂಡ ಆ 168 ಮಕ್ಕಳು ಕೂಡ ಇದೇ ರೀತಿ ಮುಗ್ಧರಾಗಿದ್ದರು. ನೀವು ನಿಮ್ಮ ಮಗುವಿಗೆ ಮುತ್ತಿಡುವಾಗ, ಆ ಮಕ್ಕಳ ತಾಯಂದಿರ ಬಗ್ಗೆಯೂ ಒಮ್ಮೆ ಯೋಚಿಸಿ,” ಎಂದು ಮಾರ್ಮಿಕವಾಗಿ ಟೀಕಿಸಿದೆ.
ಏನಿದು ಮಿನಾಬ್ ಶಾಲೆಯ ಮೇಲಿನ ದಾಳಿ?
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದವು. ಈ ವೇಳೆ ಮಿನಾಬ್‌ನ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ 73 ಗಂಡು ಮಕ್ಕಳು ಹಾಗೂ 47 ಹೆಣ್ಣು ಮಕ್ಕಳು ಸಾವನ್ನಪ್ಪಿದ್ದರು. ಇವರೊಂದಿಗೆ 26 ಶಿಕ್ಷಕರು, 7 ಪೋಷಕರು, ಶಾಲಾ ಬಸ್ ಚಾಲಕ ಮತ್ತು ಪಕ್ಕದ ಕ್ಲಿನಿಕ್‌ನ ಸಿಬ್ಬಂದಿ ಸೇರಿ 150ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಇರಾನ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಈ ಘಟನೆಗೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ಪ್ರತಿದಾಳಿ ನಡೆಸಿತ್ತು.
ಈ ಘಟನೆ ಕುರಿತು ಮಾರ್ಚ್‌ನಲ್ಲಿ ಪ್ರತಿಕ್ರಿಯಿಸಿದ್ದ ಕ್ಯಾರೋಲಿನ್ ಲೀವಿಟ್, “ಅಮೆರಿಕ ಎಂದಿಗೂ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ. ಇರಾನ್ ಆಡಳಿತ ಮಾತ್ರ ನಾಗರಿಕರು ಮತ್ತು ಮಕ್ಕಳನ್ನು ಗುರಿಯಾಗಿಸುತ್ತದೆ. ಈ ಬಗ್ಗೆ ನಮ್ಮ ರಕ್ಷಣಾ ಇಲಾಖೆ ತನಿಖೆ ನಡೆಸುತ್ತಿದೆ,” ಎಂದು ಅಮೆರಿಕದ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ಆದರೆ, ಗುರಿ ತಪ್ಪಿದ ಕಾರಣ ಅಮೆರಿಕದ ‘ಟೊಮಾಹಾಕ್’ ಕ್ರೂಸ್ ಕ್ಷಿಪಣಿಯೇ ಶಾಲೆಯ ಮೇಲೆ ಬಿದ್ದಿದೆ ಎಂದು ಅಮೆರಿಕ ಸೇನೆಯ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಘಟನೆಗೆ ಇರಾನ್ ಬಳಿ ಇರುವ ಕ್ಷಿಪಣಿಗಳೇ ಕಾರಣವಿರಬಹುದು ಎಂದು ಯಾವುದೇ ಆಧಾರವಿಲ್ಲದೆ ಆರಂಭದಲ್ಲಿ ಆರೋಪಿಸಿದ್ದರು. ತರುವಾಯ ತನಿಖಾ ವರದಿಯ ಬಗ್ಗೆ ಪ್ರಶ್ನಿಸಿದಾಗ, “ನನಗೆ ಆ ಬಗ್ಗೆ ಯಾವುದೇ ಮಾಹಿತಿಯಿಲ್ಲ,” ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.
ಇದನ್ನೂ ಓದಿ : ತಮಿಳುನಾಡಿನ ಸಿಎಂ ಆಗಿ ‘ದಳಪತಿ’ ವಿಜಯ್ ಪ್ರಮಾಣ ವಚನ : 9 ಶಾಸಕರಿಗೆ ಒಲಿದ ಸಚಿವ ಸ್ಥಾನ!



















