ಜೈಪುರ : ಹದಿನೈದು ವರ್ಷದ ಯುವ ಪ್ರತಿಭೆ ಹಾಗೂ ಐಪಿಎಲ್ 2026ರ ಟೂರ್ನಿಯಲ್ಲಿ ಬ್ಯಾಟಿಂಗ್ ಮೂಲಕವೇ ಸಂಚಲನ ಸೃಷ್ಟಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ವೈಭವ್ ಸೂರ್ಯವಂಶಿ ಇದೀಗ ಅನಿರೀಕ್ಷಿತ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಣಿಜ್ಯ ಉದ್ದೇಶದ ಈ ಬೃಹತ್ ಕ್ರಿಕೆಟ್ ಲೀಗ್‌ನಲ್ಲಿ ಅಪ್ರಾಪ್ತ ವಯಸ್ಕನಿಗೆ ಆಡಲು ಅವಕಾಶ ನೀಡಿರುವುದು ಬಾಲಕಾರ್ಮಿಕ ಪದ್ಧತಿಯ ಅಡಿಯಲ್ಲಿ ಬರುತ್ತದೆ ಎಂದು ಆರೋಪಿಸಿ ಕರ್ನಾಟಕ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಲು ಮುಂದಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಸಾಮಾಜಿಕ ಕಾರ್ಯಕರ್ತ ಸಿ.ಎಂ. ಶಿವಕುಮಾರ್ ನಾಯಕ್ ಎಂಬುವವರು ಈ ಬಗ್ಗೆ ದೂರು ನೀಡಿದ್ದು, ಯುವ ಆಟಗಾರನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಅಪ್ರಾಪ್ತ ವಯಸ್ಕರನ್ನು ಇಂತಹ ಬೃಹತ್ ವಾಣಿಜ್ಯ ಕ್ರೀಡಾಕೂಟಗಳಲ್ಲಿ ಬಳಸಿಕೊಳ್ಳುವುದು ಸರಿಯಲ್ಲ. ಇದು ಸ್ಪಷ್ಟವಾಗಿ ಬಾಲಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವೈಭವ್ ಅವರ ವೃತ್ತಿಜೀವನದಲ್ಲಿ ಈ ಬೆಳವಣಿಗೆ ಅಚ್ಚರಿ ಹಾಗೂ ಗೊಂದಲ ಮೂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದೂರಿನ ವಿರುದ್ಧ ವ್ಯಾಪಕ ಆಕ್ರೋಶ
ಕಾರ್ಯಕರ್ತರ ಈ ದೂರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ಬದಲು ಈ ರೀತಿ ಕಾನೂನು ವಿವಾದಗಳಿಗೆ ಎಳೆಯುವುದು ಸರಿಯಲ್ಲ ಎಂದು ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ಕಠಿಣ ಪರಿಶ್ರಮ ಮತ್ತು ನಿಯಮಾವಳಿಗಳ ಮೂಲಕ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿ ಅವಕಾಶ ಪಡೆದುಕೊಂಡಿರುವುದನ್ನು ‘ಶೋಷಣೆ’ ಎನ್ನಲಾಗದು, ಇದೊಂದು ಅತ್ಯುತ್ತಮ ‘ಅವಕಾಶ’ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಹಾಗೆ ನೋಡಿದರೆ, 18 ವರ್ಷಕ್ಕಿಂತ ಕೆಳಗಿನ ಎಲ್ಲಾ ಕ್ರೀಡಾಪಟುಗಳ ಬಗ್ಗೆಯೂ ಇದೇ ರೀತಿ ಪ್ರಶ್ನಿಸಬೇಕಾಗುತ್ತದೆ ಎಂದಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಹಾಗೂ ಪಾರ್ಥಿವ್ ಪಟೇಲ್ ಅವರಂತಹ ದಿಗ್ಗಜರು ಕೂಡ ಚಿಕ್ಕ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು ಎಂಬುದನ್ನು ಉದಾಹರಣೆಯಾಗಿ ನೀಡಿರುವ ಅಭಿಮಾನಿಗಳು, ಕ್ರೀಡಾ ಜಗತ್ತಿಗೆ ವಯಸ್ಸಿಗಿಂತ ಪ್ರತಿಭೆ ಮುಖ್ಯ ಎಂದು ವಾದಿಸಿದ್ದಾರೆ.
ಐಸಿಸಿ ನಿಯಮಗಳು ಏನು ಹೇಳುತ್ತವೆ?
ಈ ವಿವಾದದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಯೋಮಿತಿಯ ನಿಯಮಗಳು ಕೂಡ ಮುನ್ನೆಲೆಗೆ ಬಂದಿವೆ. ನವೆಂಬರ್ 2020ರಲ್ಲಿ ಐಸಿಸಿ ತಂದ ಹೊಸ ನಿಯಮಾವಳಿಗಳ ಪ್ರಕಾರ, ಯಾವುದೇ ಪುರುಷರ, ಮಹಿಳೆಯರ ಅಥವಾ ಅಂಡರ್-19 ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆಟಗಾರರಿಗೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು. ಕ್ರೀಡಾಪಟುಗಳ ರಕ್ಷಣೆಯ ಹಿತದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿತ್ತು. ಆದರೆ, ಈ ನಿಯಮ ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು, ಐಪಿಎಲ್‌ನಂತಹ ದೇಶೀಯ ಫ್ರಾಂಚೈಸಿ ಲೀಗ್‌ಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, 15 ವರ್ಷದವರಾದ ವೈಭವ್ ಸೂರ್ಯವಂಶಿ ತಮ್ಮ ಹಾಗೂ ಪೋಷಕರ ಸಮ್ಮತಿಯ ಮೇರೆಗೆ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದರಿಂದ, ಇದು ಕಾನೂನುಬದ್ಧ ವೃತ್ತಿಪರ ಕ್ರೀಡೆಯಾಗಲಿದೆಯೇ ಹೊರತು ಬಾಲಕಾರ್ಮಿಕ ಪದ್ಧತಿಯಾಗುವುದಿಲ್ಲ ಎನ್ನುವುದು ತಜ್ಞರ ವಾದವಾಗಿದೆ.
ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಅವರ ಅದ್ಭುತ ಸಾಧನೆ
ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ಹದಿನೈದು ವರ್ಷದ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ 10 ಪಂದ್ಯಗಳನ್ನಾಡಿರುವ ಅವರು, 40ರ ಸರಾಸರಿ ಹಾಗೂ 237ರ ಅತ್ಯದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 400 ರನ್ ಸಿಡಿಸಿದ್ದಾರೆ. ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ (ಆರೆಂಜ್ ಕ್ಯಾಪ್) ಮುಂಚೂಣಿಯಲ್ಲಿದ್ದಾರೆ. ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ರಾಯಲ್ಸ್ ತಂಡ ಪ್ಲೇಆಫ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವೈಭವ್, ಈ ವಿವಾದಗಳನ್ನು ಮೀರಿ ತಮ್ಮ ಅದ್ಭುತ ಆಟವನ್ನು ಮುಂದುವರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಪಂಜಾಬ್ ಕಳಪೆ ಫೀಲ್ಡಿಂಗ್‌ಗೆ ಕೋಚ್ ಗರಂ.. ಲೈವ್ ಸಂದರ್ಶನದಲ್ಲೇ ಸಿಡಿದೆದ್ದ ರಿಕಿ ಪಾಂಟಿಂಗ್!



















