ಬೆಂಗಳೂರು : ನಗರದಲ್ಲಿ ಮತ್ತೊಮ್ಮೆ ಯುವಕರ ಗ್ಯಾಂಗ್ ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಬರ್ತಡೇ ಪಾರ್ಟಿ ನೆಪದಲ್ಲಿ ಸ್ನೇಹಿತನನ್ನ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕೆಆರ್ ಪುರಂ ಭಾಗದ ಅಯ್ಯಪ್ಪನಗರದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, “ಪೊಲೀಸರ ಬಗ್ಗೆ ಭಯವೇ ಇಲ್ಲವಾ..? ಕಾನೂನಿನ ಬಗ್ಗೆ ಗೌರವವಿಲ್ಲವಾ..?” ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಬರ್ತಡೇ ಪಾರ್ಟಿ ಹೆಸರಿನಲ್ಲಿ ಸ್ಕೆಚ್ :
ಮಂಗಳವಾರ ಸಂಜೆ ಸುಮಾರು 7.30ರ ವೇಳೆಗೆ “ಬರ್ತಡೇ ಪಾರ್ಟಿ ಮಾಡೋಣ, ಕೇಕ್ ಕಟ್ ಮಾಡೋಣ” ಎಂದು ಹೇಳಿ ಯುವಕನನ್ನ ಕೆಆರ್ ಪುರಂನ ವಾಲಿವಾಲ್ ಗ್ರೌಂಡ್ ಕಡೆ ಕರೆದುಕೊಂಡು ಹೋಗಲಾಗಿದೆ. ಸ್ನೇಹಿತರೆಂದು ನಂಬಿ ಹೋದ ಯುವಕನ ಮೇಲೆ ಅಲ್ಲಿಗೆ ತಲುಪಿದ ಬಳಿಕ ಏಕಾಏಕಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಹೆಲ್ಮೆಟ್, ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಬಳಸಿ ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮೈ, ಕೈ, ಕಾಲು ಹಾಗೂ ಬೆನ್ನಿನಲ್ಲಿ ರಕ್ತ ಸುರಿಯುತ್ತಿದ್ದರೂ ಕೂಡ ಕಿರಾತಕರು ಡೋಂಟ್ ಕೇರ್ ಎನ್ನುವಂತೆ ವರ್ತಿಸಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಹಲ್ಲೆ ಮುಂದುವರಿದಿದೆ ಎಂದು ಹೇಳಲಾಗಿದೆ.
ಹಲ್ಲೆ ನಡೆಸುತ್ತಲೇ ವಿಡಿಯೋ ಮಾಡಿಕೊಂಡು ದರ್ಪ :
ಹಲ್ಲೆ ನಡೆಸಿದ ಆರೋಪಿಗಳು ತಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಘಟನೆಯ ವಿಡಿಯೋ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಹಲ್ಲೆ ಮಾಡುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೆ, “ಯಾರಿಗಾದ್ರು ಹೇಳಿದ್ರೆ ಕೊಲೆ ಮಾಡ್ತೀವಿ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಲ್ಲೆ ಬಳಿಕ ಯುವಕನಿಂದ ಕಾಲು ಹಿಡಿಸಿಕೊಳ್ಳುವಂತೆ ದರ್ಪ ಮೆರೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆಯ ನಂತರ ಗಾಯಗೊಂಡ ಯುವಕ ಪರಾಸ್ ಕೆಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರದೀಪ್ ಹಾಗೂ ಸಾಗರ್ ಸೇರಿದಂತೆ ಕೆಲ ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಬಳಿಕವೂ ಆರೋಪಿಗಳು ಕರೆ ಮಾಡಿ “ದೂರು ನೀಡಿದ್ರೆ ನಿನ್ನ ಕಥೆ ಮುಗಿಸಿಬಿಡ್ತೀವಿ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ :
ಕೆಆರ್ ಪುರಂ ಅಯ್ಯಪ್ಪನಗರದಲ್ಲಿ ನಡೆದ ಈ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಲ್ಲೆಯ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪಂಜಾಬ್ ಕಳಪೆ ಫೀಲ್ಡಿಂಗ್‌ಗೆ ಕೋಚ್ ಗರಂ.. ಲೈವ್ ಸಂದರ್ಶನದಲ್ಲೇ ಸಿಡಿದೆದ್ದ ರಿಕಿ ಪಾಂಟಿಂಗ್!


















