ಬೆಂಗಳೂರು: ಗ್ರಾಹಕರ ಹಿತದೃಷ್ಟಿಯಿಂದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ನಂದಿನಿ ಮೊಸರಿನ ಮಾರಾಟ ದರವನ್ನು ಪ್ರತಿ ಕೆ.ಜಿ.ಗೆ 2 ರೂಪಾಯಿಯಂತೆ ಇಳಿಕೆ ಮಾಡಿದೆ. ಈ ಪರಿಷ್ಕೃತ ದರಗಳು ಭಾನುವಾರ, ನವೆಂಬರ್ 29, 2026 ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದ ಮೇರೆಗೆ ದರ ಕಡಿತ
ರಾಜ್ಯದ ಹಾಲು ಉತ್ಪಾದಕರ ಮನವಿಯ ಮೇರೆಗೆ ಕಳೆದ ನವೆಂಬರ್ 1, 2026 ರಂದು ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಹೆಚ್ಚಿಸಲಾಗಿತ್ತು. ಆದರೆ, ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಂದಿನಿ ಮೊಸರಿನ ದರವನ್ನು ಪ್ರತಿ ಕೆ.ಜಿ.ಗೆ 2 ರೂಪಾಯಿ ಕಡಿಮೆ ಮಾಡುವಂತೆ ರಾಜ್ಯ ಸರ್ಕಾರವು ಕೆಎಂಎಫ್‌ಗೆ ನಿರ್ದೇಶನ ನೀಡಿತ್ತು. ಸರ್ಕಾರದ ಸೂಚನೆಯಂತೆ ಈಗ ದರ ಇಳಿಕೆ ಮಾಡಲಾಗಿದ್ದು, ಪರಿಷ್ಕೃತ ದರದ ಅನ್ವಯ 500 ಗ್ರಾಂ ಮೊಸರಿನ ಪ್ಯಾಕೆಟ್ ದರ 34 ರೂಪಾಯಿಯಿದ 33 ರೂಪಾಯಿಗೆ ಹಾಗೂ 1 ಕೆ.ಜಿ. (1000 ಗ್ರಾಂ) ಮೊಸರಿನ ಪ್ಯಾಕೆಟ್ ದರ 68ರೂಪಾಯಿಯಿಂದ 66 ರೂಪಾಯಿಗೆ ಇಳಿಕೆಯಾಗಲಿದೆ.
ಉತ್ಪಾದಕರು ಮತ್ತು ಗ್ರಾಹಕರ ಹಿತರಕ್ಷಣೆ
ಕಳೆದ ಐದು ದಶಕಗಳಿಂದ ಕೆಎಂಎಫ್ ರಾಜ್ಯದ ಲಕ್ಷಾಂತರ ಹೈನುಗಾರರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಇದರ ಜೊತೆಗೆ, ಅತ್ಯಾಧುನಿಕ ಸಂಸ್ಕರಣಾ ತಂತ್ರಜ್ಞಾನ ಮತ್ತು ಗುಣಮಟ್ಟದ ತಪಾಸಣೆಯ ಮೂಲಕ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಪೂರೈಸುತ್ತಾ ಬಂದಿದೆ ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.


















