ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ದಾಸನಪುರದಲ್ಲಿ ನಡೆದ ಘಟನೆಯೊಂದು ಮಹಿಳೆಯ ಜೀವಕ್ಕೆ ಸ್ಥಳೀಯರ ಸಮಯಪ್ರಜ್ಞೆ ಹೇಗೆ ಕಾವಲಾಯಿತು ಎಂಬುದಕ್ಕೆ ಸಾಕ್ಷಿಯಾಗಿದೆ. ಎರಡನೇ ಹೆಂಡತಿ ಮೋಸ ಮಾಡಿದಳು ಎಂಬ ಅನುಮಾನದಿಂದ ಗಂಡನೇ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸದಿದ್ದರೆ ದೊಡ್ಡ ಅನಾಹುತವೇ ಸಂಭವಿಸಬಹುದಾಗಿತ್ತು.
ಹೌದು.. ಸೋನಾಲಿ ಹಾಗೂ ಸಂಜಯ್ ಎಂಬ ದಂಪತಿ ನಡುವೆ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇಬ್ಬರೂ ಕೂಡ ಬಿಹಾರ ಮೂಲದವರಾಗಿದ್ದು, ಈ ಹಿಂದೆಯೇ ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರು. ನಂತರ ಇಬ್ಬರೂ ಎರಡನೇ ಮದುವೆಯಾಗಿದ್ದು, ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು, ಆರೋಪಿ ಸಂಜಯ್ ಪ್ರತಿದಿನ ಮದ್ಯಪಾನ ಮಾಡಿ ಬಂದು ಪತ್ನಿ ಸೋನಾಲಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಗಂಡನ ವರ್ತನೆಯಿಂದ ಬೇಸತ್ತಿದ್ದ ಸೋನಾಲಿ, “ಇನ್ನು ನಿನ್ನ ಜೊತೆ ಇರಲ್ಲ, ಬೇರೆ ಇರುತ್ತೀನಿ” ಎಂದು ಹೇಳಿದ್ದಾಳೆ ಎನ್ನಲಾಗಿದೆ. ಇದೇ ವಿಚಾರ ಇಬ್ಬರ ನಡುವಿನ ಗಲಾಟೆಗೆ ಪ್ರಮುಖ ಕಾರಣವಾಗಿತ್ತು ಎಂದು ತಿಳಿದುಬಂದಿದೆ.
ಪತ್ನಿ ದೂರವಾಗಲು ನಿರ್ಧರಿಸಿದ್ದಕ್ಕೆ ಕೋಪಗೊಂಡ ಸಂಜಯ್, ಸೋನಾಲಿಯನ್ನು ಚಾಕುವಿನಿಂದ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಗಲಾಟೆ ಮಾಡುತ್ತಾ ಇಬ್ಬರೂ ಬೀದಿಗೆ ಬಂದಿದ್ದು, ಇದೇ ವೇಳೆ ಬೈಕ್‌ನಲ್ಲಿ ಬಂದ ಸಂಜಯ್ ಪತ್ನಿ ಮೇಲೆ ಚಾಕು ಹಿಡಿದು ಎರಗಿದ್ದಾನೆ ಎಂದು ಹೇಳಲಾಗಿದೆ.
ಸಂಜಯ್ ಚಾಕು ಕುತ್ತಿಗೆಗೆ ಇಟ್ಟ ಕ್ಷಣದಲ್ಲೇ ಅಲ್ಲಿದ್ದ ಸ್ಥಳೀಯರು ಧೈರ್ಯವಾಗಿ ಮಧ್ಯಪ್ರವೇಶಿಸಿದ್ದಾರೆ. ಮಹಿಳೆಯ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದ ಸಂಜಯ್‌ಗೆ ಸ್ಥಳೀಯರು ಗೂಸಾ ಕೊಟ್ಟು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಕಂಡ ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡ ಕಾರಣ ಮಹಿಳೆಯ ಜೀವ ಉಳಿದಿದೆ. ಕೆಲವೇ ಕ್ಷಣ ತಡವಾದರೂ ದೊಡ್ಡ ದುರಂತವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಮಹಿಳೆಯನ್ನು ರಕ್ಷಿಸಿದ ಸ್ಥಳೀಯರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಘಟನಾ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಗಂಡ-ಹೆಂಡತಿಗೆ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ನೇಪಾಳಿ ಯುವಕರ ಅಟ್ಟಹಾಸ ; ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ದರ್ಪ!


















