ವಾಷಿಂಗ್ಟನ್ : ಶೀತಲ ಸಮರದ ಕಾಲದ ಅತ್ಯಂತ ಶಕ್ತಿಶಾಲಿ ಪರಮಾಣು ದಾಳಿ ಸಾಮರ್ಥ್ಯ ಹೊಂದಿರುವ ಎರಡು ಬೃಹತ್ ಯುದ್ಧ ವಿಮಾನಗಳು ಒಂದೇ ದಿನ ಪತನಗೊಳ್ಳುವ ಮೂಲಕ ಜಾಗತಿಕ ರಕ್ಷಣಾ ವಲಯದಲ್ಲಿ ತಲ್ಲಣ ಸೃಷ್ಟಿಸಿವೆ. ಅಮೆರಿಕ ವಾಯುಪಡೆಯ ‘ಬಿ-52 ಸ್ಟ್ರಾಟೋಫೋರ್ಟ್ರೆಸ್’ (B-52 Stratofortress) ಮತ್ತು ರಷ್ಯಾದ ರಕ್ಷಣಾ ಪಡೆಯ ‘ಟು-22ಎಮ್3’ (Tu-22M3) ಆಯಕಟ್ಟಿನ ಬಾಂಬರ್ ವಿಮಾನಗಳು ಸೋಮವಾರ ಕೆಲವೇ ಗಂಟೆಗಳ ಅಂತರದಲ್ಲಿ ಅಪಘಾತಕ್ಕೀಡಾಗಿವೆ. ದಶಕಗಳಿಂದ ಉಭಯ ದೇಶಗಳ ಪರಮಾಣು ನಿಗ್ರಹ ಶಕ್ತಿಯ ಬೆನ್ನೆಲುಬಾಗಿದ್ದ ಈ ದೈತ್ಯ ವಿಮಾನಗಳು ಕಾಕತಾಳೀಯವಾಗಿ ಒಂದೇ ದಿನ ಪತನವಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಅಮೆರಿಕದಲ್ಲಿ ಬಿ-52 ಪತನ: ಎಂಟು ಸಿಬ್ಬಂದಿ ದುರ್ಮರಣ
ದಕ್ಷಿಣ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅಮೆರಿಕದ ಬಿ-52 ಬಾಂಬರ್ ವಿಮಾನವು ರನ್‌ವೇ ಮೇಲೆಯೇ ಪತನಗೊಂಡು ಭೀಕರವಾಗಿ ಸ್ಫೋಟಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಇಬ್ಬರು ಬೋಯಿಂಗ್ ಸಂಸ್ಥೆಯ ಉದ್ಯೋಗಿಗಳು ಸೇರಿದಂತೆ ಒಟ್ಟು ಎಂಟು ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ರೇಡಾರ್ ಆಧುನೀಕರಣ ಯೋಜನೆಯ ತಾಂತ್ರಿಕ ಪರೀಕ್ಷಾರ್ಥ ಹಾರಾಟದ ವೇಳೆ ಈ ಅಪಘಾತ ಸಂಭವಿಸಿದೆ. ವಿಮಾನ ಪತನದ ತೀವ್ರತೆಗೆ ಇಡೀ ರನ್‌ವೇ ಜರ್ಜರಿತವಾಗಿದ್ದು, ಎಡ್ವರ್ಡ್ಸ್ ನೆಲೆಯ ಎಲ್ಲಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 2016ರ ನಂತರ ಜರುಗಿದ ಮೊದಲ ಬಿ-52 ದುರಂತ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬೀರಿಯಾದಲ್ಲಿ ಪತನಗೊಂಡ ರಷ್ಯಾದ ಸೂಪರ್ಸಾನಿಕ್ ಬಾಂಬರ್
ಇದೇ ದಿನ, ರಷ್ಯಾದ ಸೈಬೀರಿಯಾ ಪ್ರಾಂತ್ಯದ ಇರ್ಕುಟ್ಸ್ಕ್ ಪ್ರದೇಶದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ಟು-22ಎಮ್3 ಸೂಪರ್ಸಾನಿಕ್ ಬಾಂಬರ್ ವಿಮಾನವು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ಪೈಲಟ್‌ಗಳು ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ಇಜೆಕ್ಟ್ (ವಿಮಾನದಿಂದ ಹೊರಗೆ ಜಿಗಿಯುವುದು) ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗಾರ ನದಿಯ ದಂಡೆಯ ಸಮೀಪವಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ವಿಮಾನವು ಬಿದ್ದಿದ್ದು, ಯಾವುದೇ ಯುದ್ಧ ಶಸ್ತ್ರಾಸ್ತ್ರಗಳನ್ನು ಹೊಂದಿರದ ಕಾರಣ ಭೂಮಿಯ ಮೇಲೆ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ರಷ್ಯಾ ರಕ್ಷಣಾ ಸಚಿವಾಲಯ ಖಚಿತಪಡಿಸಿದೆ.
ದಶಕಗಳ ಇತಿಹಾಸ ಮತ್ತು ಬದಲಿ ತಂತ್ರಜ್ಞಾನದ ಕೊರತೆ
ಬಿ-52 ಮತ್ತು ಟು-22ಎಮ್3 ಬಾಂಬರ್‌ಗಳು ತಮ್ಮ ಅಗಾಧ ಶಸ್ತ್ರಾಸ್ತ್ರ ಸಾಮರ್ಥ್ಯ, ದೂರಗಾಮಿ ಹಾರಾಟದ ಶ್ರೇಣಿ ಮತ್ತು ಆರ್ಥಿಕ ದಕ್ಷತೆಯಿಂದಾಗಿ ದಶಕಗಳಿಂದ ಅಮೆರಿಕ ಮತ್ತು ರಷ್ಯಾ ಮಿಲಿಟರಿಗಳಲ್ಲಿ ಸಕ್ರಿಯ ಸೇವೆಯಲ್ಲಿವೆ. ಅಮೆರಿಕದ ಬಿ-52 ವಿಮಾನವು ಬರೋಬ್ಬರಿ 31,750 ಕೆಜಿ ತೂಕದ ಸಾಂಪ್ರದಾಯಿಕ ಹಾಗೂ ಪರಮಾಣು ಬಾಂಬುಗಳನ್ನು ಹೊತ್ತೊಯ್ಯಬಲ್ಲದಾಗಿದ್ದರೆ, ರಷ್ಯಾದ ಟು-22ಎಮ್3 ‘ಕಿಂಜಾಲ್’ ನಂತಹ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಶೀತಲ ಸಮರದ ನಂತರ ಎರಡೂ ದೇಶಗಳು ಇಂತಹ ದೈತ್ಯ ವಿಮಾನಗಳ ಅಭಿವೃದ್ಧಿಗೆ ಹೊಸ ಹೂಡಿಕೆ ಮಾಡದ ಕಾರಣ, ಇವುಗಳ ಆಧುನೀಕೃತ ಆವೃತ್ತಿಗಳೇ ಇಂದಿಗೂ ಬಳಕೆಯಲ್ಲಿವೆ. ಪ್ರಸ್ತುತ ಉಭಯ ದೇಶಗಳು ಬಿ-21 ಮತ್ತು ಪಿಎಕೆ ಡಿಪಿ (PAK DP) ನಂತಹ ಮುಂದಿನ ಪೀಳಿಗೆಯ ಬಾಂಬರ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದರೂ, ಅವುಗಳ ಅಭವೃದ್ಧಿ ವಿಳಂಬವಾಗಿವೆ.
ಇದನ್ನೂ ಓದಿ : ಇನ್ಮುಂದೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಶಾಪ್‌ನಲ್ಲಿ ಸಿರಪ್ ಸಿಗಲ್ಲ – ಕೇಂದ್ರ ಸರ್ಕಾರ ಹೊಸ ರೂಲ್ಸ್



















