ನವದೆಹಲಿ : ಸಣ್ಣಪುಟ್ಟ ಕೆಮ್ಮು, ನೆಗಡಿ ಕಾಣಿಸಿಕೊಂಡ ತಕ್ಷಣ ಮೆಡಿಕಲ್ ಶಾಪ್‌ಗಳಿಗೆ ಹೋಗಿ ನಿಮಗೆ ಬೇಕಾದ ಕೆಮ್ಮಿನ ಸಿರಪ್‌ಗಳನ್ನು (Cough Syrups) ಖರೀದಿಸುತ್ತೀರಾ? ಇನ್ನು ಮುಂದೆ ನೀವು ಈ ರೀತಿ ಮಾಡುವಂತಿಲ್ಲ. ದೇಶಾದ್ಯಂತ ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ರೀತಿಯ ಲಿಕ್ವಿಡ್ ಔಷಧಗಳ ಮುಕ್ತ ಮಾರಾಟವನ್ನು ತಡೆಯಲು ಕೇಂದ್ರ ಸರ್ಕಾರವು 1945ರ ಔಷಧ ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ನಿಯಮದ ಪ್ರಕಾರ, ಗ್ರಾಹಕರು ಯಾವುದೇ ಸಿರಪ್‌ಗಳನ್ನು ಖರೀದಿಸಬೇಕಾದರೂ ನೋಂದಾಯಿತ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ (ವೈದ್ಯರ ಚೀಟಿ) ತೋರಿಸುವುದು ಇನ್ನು ಮುಂದೆ ಕಡ್ಡಾಯವಾಗಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಕಲಿ ಕೆಮ್ಮಿನ ಸಿರಪ್‌ಗಳನ್ನು ಸೇವಿಸಿ ಹಲವು ಮಕ್ಕಳು ಸಾವನ್ನಪ್ಪಿದ್ದ ಘಟನೆ ದೇಶಾದ್ಯಂತ ಭಾರಿ ಆತಂಕ ಸೃಷ್ಟಿಸಿತ್ತು. ಈ ದುರಂತದ ಬೆನ್ನಲ್ಲೇ ಸಿರಪ್‌ಗಳ ತಯಾರಿಕೆ, ಗುಣಮಟ್ಟ ಮತ್ತು ಮಾರಾಟದ ಮೇಲೆ ಕಠಿಣ ನಿಯಂತ್ರಣ ಹೇರಬೇಕು ಎಂಬ ಆಗ್ರಹಗಳು ತೀವ್ರವಾಗಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಕಳೆದ ಡಿಸೆಂಬರ್‌ನಲ್ಲಿ ಈ ಕುರಿತು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರ ಸಲಹೆ-ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಜೂನ್ 9 ರಂದು ಅಧಿಕೃತವಾಗಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ.
‘ಶೆಡ್ಯೂಲ್ ಕೆ’ ನಿಂದ ಹೊರಬಿದ್ದ ಸಿರಪ್‌ಗಳು :
ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹರ್ಷ್ ಮಂಗ್ಲಾ ಅವರು ಹೊರಡಿಸಿರುವ ಈ ಆದೇಶವನ್ನು ‘ಔಷಧಗಳ (ಐದನೇ ತಿದ್ದುಪಡಿ) ನಿಯಮಗಳು, 2026’ ಎಂದು ಹೆಸರಿಸಲಾಗಿದೆ. 1940ರ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ಸೆಕ್ಷನ್ 12 ಮತ್ತು 33ರ ಅಡಿಯಲ್ಲಿ ಸಿಕ್ಕಿರುವ ಅಧಿಕಾರವನ್ನು ಬಳಸಿ ಈ ತಿದ್ದುಪಡಿ ಮಾಡಲಾಗಿದೆ. ಈ ಹೊಸ ನಿಯಮಾವಳಿಯ ಪ್ರಕಾರ, ಈ ಹಿಂದೆ ವೈದ್ಯರ ಚೀಟಿ ಇಲ್ಲದೆ ನೇರವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದ ಔಷಧಗಳ ‘ಶೆಡ್ಯೂಲ್ ಕೆ’ (Schedule K) ಪಟ್ಟಿಯಿಂದ ‘ಸಿರಪ್’ (Syrups)ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಪ್ರಕ್ರಿಯೆಯಿಂದಾಗಿ ಸಿರಪ್‌ಗಳ ‘ಓವರ್ ದಿ ಕೌಂಟರ್’ (OTC) ಅಂದರೆ ಮುಕ್ತ ಮಾರಾಟದ ವ್ಯವಸ್ಥೆ ಅಧಿಕೃತವಾಗಿ ಅಂತ್ಯಗೊಂಡಂತಾಗಿದೆ.
ಗ್ರಾಹಕರು, ಫಾರ್ಮಸಿಗಳ ಮೇಲೆ ಬೀರುವ ಪ್ರಭಾವವೇನು?
ಈ ಬದಲಾವಣೆಯಿಂದಾಗಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಸಿರಪ್‌ಗಳ ಮುಕ್ತ ವಹಿವಾಟಿಗೆ ದೊಡ್ಡ ಮಟ್ಟದ ಬ್ರೇಕ್ ಬೀಳಲಿದೆ. ಇನ್ಮುಂದೆ ದೇಶದ ಯಾವುದೇ ಭಾಗದ ಔಷಧಾಲಯಗಳು ವೈದ್ಯರ ಲಿಖಿತ ಅನುಮತಿಯಿಲ್ಲದೆ ಕೆಮ್ಮಿನ ಸಿರಪ್‌ಗಳನ್ನು ಗ್ರಾಹಕರಿಗೆ ನೀಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಮಾರಾಟ ಮಾಡಿದರೆ ಅಂತಹ ಫಾರ್ಮಸಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ತಿದ್ದುಪಡಿಯು ತಕ್ಷಣದಿಂದಲೇ ಜಾರಿಗೆ ಬಂದಿರುವುದರಿಂದ, ಸಾರ್ವಜನಿಕರು ಸಣ್ಣಪುಟ್ಟ ಆರೋಗ್ಯ ಏರುಪೇರಾದಾಗಲೂ ಸ್ವಯಂ ವೈದ್ಯ ಪದ್ಧತಿಗೆ ಶರಣಾಗದೆ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಇದನ್ನೂ ಓದಿ : ಕದ್ದ ಬೈಕ್‌ಗಳ ನಂಬರ್ ಪ್ಲೇಟ್ ಬದಲಿಸಿ ಫೇಸ್‌ಬುಕ್, OLXನಲ್ಲಿ ಮಾರಾಟ ಮಾಡ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್!



















