ನವದೆಹಲಿ : ಸಾಲದ ಕಂತುಗಳನ್ನು (ಇಎಮ್‌ಐ) ಪಾವತಿಸುವುದು ಸ್ವಲ್ಪ ತಡವಾದರೂ ಸಾಕು, ಮಧ್ಯರಾತ್ರಿಯೆನ್ನದೆ ಬರುವ ಅಪರಿಚಿತ ಕರೆಗಳು, ಮನೆ ಬಾಗಿಲಿಗೆ ಬಂದು ಬೆದರಿಕೆ ಹಾಕುವ ವಸೂಲಾತಿ ಏಜೆಂಟರು ಹಾಗೂ ಗ್ರಾಹಕರ ಆತ್ಮಗೌರವಕ್ಕೆ ಧಕ್ಕೆ ತರುವ ಘಟನೆಗಳಿಗೆ ಇನ್ಮುಂದೆ ಪೂರ್ಣವಿರಾಮ ಬೀಳಲಿದೆ.
ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ದೌರ್ಜನ್ಯ ಮತ್ತು ಕಿರುಕುಳಗಳಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅತ್ಯಂತ ಬಿಗಿಯಾದ ಹಾಗೂ ವಿಸ್ತೃತವಾದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಪ್ರತಿಯೊಬ್ಬ ನಾಗರಿಕನ ಗೌರವ, ಗೌಪ್ಯತೆ ಮತ್ತು ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ರೂಪಿಸಲಾಗಿರುವ ಈ ಹೊಸ ನಿಯಮಗಳು 2027ರ ಜನವರಿ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.
ಹೊಸ ನಿಯಮಗಳ ಪ್ರಕಾರ, ವಸೂಲಾತಿ ಏಜೆಂಟರ ಪ್ರತಿಯೊಂದು ಹಂತದ ನಡವಳಿಕೆಗೆ ಬ್ಯಾಂಕುಗಳೇ ನೇರ ಹೊಣೆಯಾಗಲಿವೆ. ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಮಾನಸಿಕ ಅಥವಾ ಆರ್ಥಿಕ ನಷ್ಟ ಉಂಟುಮಾಡಿದರೆ ಬ್ಯಾಂಕುಗಳು ಸಂತ್ರಸ್ತ ಗ್ರಾಹಕರಿಗೆ ಸೂಕ್ತ ಪರಿಹಾರ ನೀಡಬೇಕಾಗುತ್ತದೆ. ಬ್ಯಾಂಕುಗಳು ತಮ್ಮ ಆಡಳಿತ ಮಂಡಳಿಯಿಂದ ಅನುಮೋದಿಸಲ್ಪಟ್ಟ ಸಾಲ ವಸೂಲಾತಿ ನೀತಿಯನ್ನು ಹೊಂದಿರಬೇಕು ಮತ್ತು ವಸೂಲಾತಿ ಏಜೆನ್ಸಿಗಳ ನೇಮಕ, ಮೇಲ್ವಿಚಾರಣೆ ಹಾಗೂ ಆಡಿಟಿಂಗ್ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಆರ್‌ಬಿಐ ಕಟ್ಟುನಿಟ್ಟಿನ ಆದೇಶ ನೀಡಿದೆ.
ಏಜೆಂಟರ ಬೆದರಿಕೆಗಳಿಗೆ ಸಂಪೂರ್ಣ ನಿಷೇಧ
ವಸೂಲಾತಿಯ ಹೆಸರಿನಲ್ಲಿ ನಡೆಯುವ ಅಮಾನವೀಯ ಪದ್ಧತಿಗಳಿಗೆ ಆರ್‌ಬಿಐ ಸಂಪೂರ್ಣ ತಡೆ ಒಡ್ಡಿದೆ. ಸಾಲಗಾರರನ್ನು ಅಥವಾ ಅವರ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಹಾಗೂ ಕಚೇರಿಯ ಸಹೋದ್ಯೋಗಿಗಳನ್ನು ಬೆದರಿಸುವುದು, ನಿಂದನೀಯ ಭಾಷೆ ಬಳಸುವುದು ಮತ್ತು ಅನಾಮಧೇಯ ಕರೆಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಗ್ರಾಹಕರ ವೈಯಕ್ತಿಕ ವಿವರಗಳು, ಆಡಿಯೋ ಅಥವಾ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಾರ್ವಜನಿಕವಾಗಿ ಮಾನಹಾನಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಸಾಲದ ಮೊತ್ತ ಹಾಗೂ ವಾಪಸ್ ಪಾವತಿಸದಿದ್ದರೆ ಎದುರಿಸಬೇಕಾದ ಪರಿಣಾಮಗಳ ಕುರಿತು ಸುಳ್ಳು ಅಥವಾ ದಾರಿ ತಪ್ಪಿಸುವ ಹೆದರಿಕೆಗಳನ್ನು ಒಡ್ಡುವಂತಿಲ್ಲ.
ಸಮಯದ ಮಿತಿ ನಿಗತಿ
ಇದಲ್ಲದೆ, ಏಜೆಂಟರು ಗ್ರಾಹಕರನ್ನು ಸಂಪರ್ಕಿಸಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯ ಅವಧಿಯಲ್ಲಿ ಮಾತ್ರ ಸಾಲಗಾರರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಅಥವಾ ನೇರವಾಗಿ ಭೇಟಿಯಾಗಲು ಅವಕಾಶವಿರುತ್ತದೆ. ಈ ಸಮಯವನ್ನು ಹೊರತುಪಡಿಸಿ ಕರೆ ಮಾಡಲು ಗ್ರಾಹಕರೇ ಸ್ವತಃ ಸ್ಪಷ್ಟ ಸಮ್ಮತಿ ನೀಡಿದ್ದರೆ ಮಾತ್ರ ಅನುಮತಿ ಸಿಗಲಿದೆ. ಕುಟುಂಬದಲ್ಲಿ ಸಂಭವಿಸಿದ ಸಾವು, ವೈದ್ಯಕೀಯ ತುರ್ತು ಪರಿಸ್ಥಿತಿಗಳು ಅಥವಾ ಮದುವೆಯಂತಹ ಸಂದರ್ಭಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಕಿರುಕುಳ ನೀಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಪಾರದರ್ಶಕತೆ, ಕರೆ ರೆಕಾರ್ಡಿಂಗ್
ಇನ್ಮುಂದೆ ಯಾವುದೇ ವಸೂಲಾತಿ ಏಜೆಂಟ್ ಮನೆಗೆ ಬರುವ ಮೊದಲು ಬ್ಯಾಂಕುಗಳು ಕನಿಷ್ಠ ಒಂದು ದಿನ ಮುಂಚಿತವಾಗಿ ಗ್ರಾಹಕರಿಗೆ ಮಾಹಿತಿ ನೀಡಬೇಕು. ಮನೆಗೆ ಭೇಟಿ ನೀಡುವ ಏಜೆಂಟ್ ತನ್ನ ಗುರುತಿನ ಚೀಟಿ, ಬ್ಯಾಂಕ್ ನೀಡಿರುವ ಅಧಿಕಾರ ಪತ್ರ ಮತ್ತು ದೂರು ಅಧಿಕಾರಿಯ ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ವಸೂಲಾತಿಯ ಸಂಭಾಷಣೆಯ ಪ್ರತಿಯೊಂದು ಕರೆಯನ್ನು ಬ್ಯಾಂಕುಗಳು ರೆಕಾರ್ಡ್ ಮಾಡಬೇಕಿದ್ದು, ಈ ದಾಖಲೆಗಳನ್ನು ಕನಿಷ್ಠ ಆರು ತಿಂಗಳ ಕಾಲ ಕಾಯ್ದಿರಿಸಬೇಕು. ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೆ ಅಂತಿಮ ತೀರ್ಪು ಬರುವವರೆಗೆ ಕರೆ ದಾಖಲೆಗಳನ್ನು ಭದ್ರವಾಗಿಡಬೇಕಾಗುತ್ತದೆ.
ವಸೂಲಾತಿ ಏಜೆಂಟರಿಗೆ ನೀಡಲಾಗುವ ಮಾಸಿಕ ಗುರಿಗಳು ಅಥವಾ ಪ್ರೋತ್ಸಾಹಧನಗಳು (ಇನ್ಸೆಂಟಿವ್ಸ್) ಅವರನ್ನು ಹಿಂಸಾತ್ಮಕ ದಾರಿಗೆ ತಳ್ಳದಂತೆ ಬ್ಯಾಂಕುಗಳು ತಮ್ಮ ನೀತಿಯನ್ನು ಪುನರಾವಲೋಕಿಸಬೇಕಿದೆ. ಪ್ರತಿಯೊಂದು ಬ್ಯಾಂಕ್ ಸಾಲ ವಸೂಲಾತಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ದೂರು ಪರಿಹಾರ ವ್ಯವಸ್ಥೆಯನ್ನು ರೂಪಿಸಬೇಕು ಹಾಗೂ ಈ ಅಧಿಕಾರಿಯ ವಿವರಗಳನ್ನು ಸಾಲದ ಒಪ್ಪಂದದಲ್ಲೇ ಸ್ಪಷ್ಟಪಡಿಸಬೇಕು. ಈ ಮೂಲಕ ಬ್ಯಾಂಕುಗಳು ಸಾಲ ವಸೂಲಿ ಮಾಡುವ ತಮ್ಮ ಹಕ್ಕನ್ನು ಚಲಾಯಿಸುವಾಗ ಗ್ರಾಹಕರ ಮಾನವ ಹಕ್ಕುಗಳನ್ನು ಹಾಗೂ ನೈತಿಕತೆಯನ್ನು ಮೀರುವಂತಿಲ್ಲ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಚಿಟ್‌ಗಳು, ಪ್ರಶ್ನೆಗಳ ನೆನಪು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಕರಾಳ ರಹಸ್ಯ ಬಿಚ್ಚಿಟ್ಟ CBI ಆರೋಪ ಪಟ್ಟಿ!



















