ನವದೆಹಲಿ : ನಮ್ಮ ದೇಶದ ರಸ್ತೆ ಗುಂಡಿಗಳಿಗೆ ಪ್ರತಿ ವರ್ಷ ಸಾವಿರಾರು ಮಂದಿ ಬಲಿಯಾಗುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಹಲವು ಬಾರಿ ಇದನ್ನು ಖಂಡಿಸಿ ಪ್ರತಿಭಟನೆಗಳೂ ನಡೆದಿವೆ.
ಇದೀಗ ದೇಶದ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿರುವ ಗುಂಡಿಗಳು ಹಾಗೂ ಬಿರುಕುಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೊರೆಹೋಗಲು ನಿರ್ಧರಿಸಿದೆ. ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ (PMGSY) ಅಡಿಯಲ್ಲಿ ನಿರ್ಮಿಸಲಾದ ರಸ್ತೆಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಸ್ಮಾರ್ಟ್ಫೋನ್ಗಳಲ್ಲಿ ಚಿತ್ರೀಕರಿಸಿದ ವಿಡಿಯೋಗಳನ್ನು ಆಧರಿಸಿ ಕಾರ್ಯನಿರ್ವಹಿಸುವ ಹೊಸ ಎಐ ವ್ಯವಸ್ಥೆಯ ದೇಶವ್ಯಾಪಿ ಪ್ರಯೋಗವನ್ನು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಪ್ರಾರಂಭಿಸಿದೆ. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿರುವ ಈ ಯೋಜನೆಯನ್ನು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಮತ್ತು ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (NRIDA) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಸದ್ಯ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ರಸ್ತೆಗಳ ನಿರ್ವಹಣೆಯನ್ನು ಅಧಿಕಾರಿಗಳ ಪ್ರತ್ಯಕ್ಷ ಪರಿಶೀಲನೆ ಹಾಗೂ ಇ-ಮಾರ್ಗ್ (eMARG) ಆ್ಯಪ್ ಮೂಲಕ ಪೋಟೋ ಅಪ್ಲೋಡ್ ಮಾಡುವ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಆದರೆ ನೂತನ ವ್ಯವಸ್ಥೆಯಲ್ಲಿ, ವಾಹನಗಳಿಗೆ ಅಳವಡಿಸಲಾದ ಮೊಬೈಲ್ ಸಾಧನಗಳ ಮೂಲಕ ರಸ್ತೆಯ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗುತ್ತದೆ. ಈ ಎಐ ವ್ಯವಸ್ಥೆಯು ರಸ್ತೆಯಲ್ಲಿರುವ ಗುಂಡಿಗಳು, ಉದ್ದವಾದ ಬಿರುಕುಗಳು, ಅಡ್ಡ ಬಿರುಕುಗಳು, ಅಂಚುಗಳಿಗಾಗಿರುವ ಹಾನಿ, ತಗ್ಗುಗಳು ಹಾಗೂ ಸಸ್ಯವರ್ಗದ ಅಡೆತಡೆಗಳು ಸೇರಿದಂತೆ ಒಟ್ಟು ಏಳು ರೀತಿಯ ದೋಷಗಳನ್ನು ನಿಖರವಾಗಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
ಎಂಜಿನಿಯರ್ಗಳಿಂದ ಪರಿಶೀಲನೆ
ಎಐ ತಂತ್ರಜ್ಞಾನವನ್ನು ಕೇವಲ ನಿರ್ಧಾರ ಕೈಗೊಳ್ಳುವ ಸಹಾಯಕ ಸಾಧನವಾಗಿ ಮಾತ್ರವೇ ಬಳಸಲಾಗುತ್ತಿದ್ದು, ಸಿಡಿಎಸಿ ನೀಡುವ ವರದಿಯನ್ನು ಕ್ಷೇತ್ರ ಎಂಜಿನಿಯರ್ಗಳು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲಿಸಲಿದ್ದಾರೆ. ಎಐ ನೀಡಿದ ವರದಿ ಮತ್ತು ಎಂಜಿನಿಯರ್ಗಳು ಮಾಡಿದ ಅಳತೆಗಳ ನಡುವೆ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸಿ, ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸಲಾಗುತ್ತದೆ. ಗುತ್ತಿಗೆದಾರರ ಐದು ವರ್ಷಗಳ ಉಸ್ತುವಾರಿ ಮತ್ತು ನಿರ್ವಹಣಾ ಹೊಣೆಗಾರಿಕೆ ನಿಯಮಗಳು ಯಥಾವತ್ತಾಗಿ ಮುಂದುವರಿಯಲಿದ್ದು, ಭವಿಷ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ರಸ್ತೆಗಳ ಸ್ಥಿತಿಗತಿಯನ್ನು ಈ ತಂತ್ರಜ್ಞಾನದ ಮೂಲಕ ಪರಿಶೀಲಿಸುವ ಯೋಜನೆಯಿದೆ.
ಪೂನಾ, ಲಖನೌನಿಂದ ದೇಶವ್ಯಾಪಿ ವಿಸ್ತರಣೆ
ಈ ವರ್ಷದ ಆರಂಭದಲ್ಲಿ ಪುಣೆ, ಲಖನೌ, ಅಸ್ಸಾಂನ ಕಾಮರೂಪ್ ಮತ್ತು ಮೇಘಾಲಯದ ರಿ-ಭೋಯ್ ಜಿಲ್ಲೆಗಳ ಆಯ್ದ ರಸ್ತೆಗಳಲ್ಲಿ ಮೊದಲ ಹಂತದ ಪ್ರಯೋಗಗಳನ್ನು ನಡೆಸಲಾಗಿತ್ತು. ನಂತರ ಕಾನ್ಪುರ ಮತ್ತು ಭೋಪಾಲ್ನ ರಸ್ತೆಗಳಲ್ಲಿ ಇದರ ಸುಧಾರಿತ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಸೆಪ್ಟೆಂಬರ್ 1 ರಿಂದ ದೇಶವ್ಯಾಪಿ ಈ ಪ್ರಾಯೋಗಿಕ ಪರೀಕ್ಷೆಗಳು ಆರಂಭಗೊಂಡಿದ್ದು, ಇದರ ಯಶಸ್ಸಿನ ಆಧಾರದ ಮೇಲೆ ಸಚಿವಾಲಯವು ದೇಶದಾದ್ಯಂತ ಈ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲಿದೆ.
ಇದನ್ನೂ ಓದಿ : ಜಿಯೋ ಗ್ರಾಹಕರಿಗೆ ಬಂಪರ್ : ಇವರಿಗೆಲ್ಲ ಒಂದು ವರ್ಷ ಅಮೆಜಾನ್ ಪ್ರೈಮ್ ಉಚಿತ



















