ನವದೆಹಲಿ : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ 94 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ. ಈ ಚಾರ್ಜ್‌ಶೀಟ್‌ನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ವಿಷಯ ತಜ್ಞರೇ ಪ್ರಶ್ನೆ ಪತ್ರಿಕೆ ಸೋರಿಕೆಯ ಮುಖ್ಯ ರೂವಾರಿಗಳು ಎಂಬ ದಿಗಿಲು ಹುಟ್ಟಿಸುವ ಸತ್ಯಗಳು ಹೊರಬಿದ್ದಿವೆ.
ಎನ್‌ಟಿಎ ತಂಡದಲ್ಲಿದ್ದ ಮೂವರು ಪ್ರಮುಖ ವಿಷಯ ತಜ್ಞರು ಅತ್ಯಂತ ವ್ಯವಸ್ಥಿತವಾಗಿ ಪ್ರಶ್ನೆಗಳನ್ನು ಕದ್ದು, ಖಾಸಗಿ ಕೋಚಿಂಗ್ ಸೆಂಟರ್‌ಗಳು ಹಾಗೂ ಮಧ್ಯವರ್ತಿಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಿರುವುದು ತನಿಖೆಯಿಂದ ದೃಢಪಟ್ಟಿದೆ. ರಸಾಯನಶಾಸ್ತ್ರ ತಜ್ಞ ಪಿ.ವಿ. ಕುಲಕರ್ಣಿ, ಸಸ್ಯಶಾಸ್ತ್ರ ತಜ್ಞೆ ಮನಿಷಾ ಮಂಧಾರೆ ಹಾಗೂ ಭೌತಶಾಸ್ತ್ರ ತಜ್ಞೆ ಮನಿಷಾ ಹವಾಲ್ದಾರ್ ಈ ಪ್ರಕರಣದ ಮುಖ್ಯ ಸೂತ್ರಧಾರರಾಗಿದ್ದಾರೆ.
ಎನ್‌ಟಿಎ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಪರಿಶೀಲನೆ ಮತ್ತು ಅನುವಾದ ಪ್ರಕ್ರಿಯೆ ನಡೆಯುತ್ತಿದ್ದಾಗ, ಈ ತಜ್ಞರು ಸಣ್ಣ ಸಣ್ಣ ಕಾಗದದ ಚೀಟಿಗಳಲ್ಲಿ (ಚಿಟ್‌ಗಳಲ್ಲಿ) ಪ್ರಶ್ನೆಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಎನ್‌ಸಿಇಆರ್‌ಟಿ (NCERT) ಪಠ್ಯಪುಸ್ತಕಗಳ ಸಂಬಂಧಿತ ಪ್ಯಾರಾಗ್ರಾಫ್‌ಗಳಿಗೆ ಗುರುತು ಹಾಕಿ, ಯಾವುದೇ ಡಿಜಿಟಲ್ ಪುರಾವೆ ಸಿಗದಂತೆ ಜಾಗರೂಕತೆ ವಹಿಸಿ ಮಧ್ಯವರ್ತಿಗಳಿಗೆ ಮಾಹಿತಿ ತಲುಪಿಸುತ್ತಿದ್ದರು. ಸುಲಭದ ಪ್ರಶ್ನೆಗಳನ್ನು ನೆನಪಿನಲ್ಲಿಟ್ಟುಕೊಂಡು, ದಿನದ ಕೊನೆಯಲ್ಲಿ ತಮ್ಮ ಹೋಟೆಲ್ ಕೊಠಡಿಗೆ ತೆರಳಿ ಕಾಗದದ ಮೇಲೆ ಬರೆದಿಡುತ್ತಿದ್ದರು.
ಎನ್‌ಟಿಎ ಭದ್ರತಾ ಲೋಪ
ಈ ಅಕ್ರಮದ ಹಿಂದೆ ಕೋಚಿಂಗ್ ಸೆಂಟರ್‌ಗಳ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಹಣದ ದುರಾಸೆಯ ಉದ್ದೇಶವಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಎನ್‌ಟಿಎ ಗೌಪ್ಯ ವಿಭಾಗಕ್ಕೆ ತಜ್ಞರು ಪ್ರವೇಶಿಸುವಾಗ ಮತ್ತು ಹೊರಹೋಗುವಾಗ ಸೂಕ್ತ ದೇಹ ತಪಾಸಣೆ (ಫ್ರಿಸ್ಕಿಂಗ್) ಅಥವಾ ಸಿಸಿಟಿವಿ ಕಣ್ಣಾವಲು ಇಲ್ಲದಿರುವುದು ಆರೋಪಿಗಳಿಗೆ ವರವಾಗಿತ್ತು. 20,000 ಪುಟಗಳ ದಾಖಲೆಗಳು, 360 ಸಾಕ್ಷಿಗಳು ಹಾಗೂ 422 ದಾಖಲೆಗಳನ್ನೊಳಗೊಂಡ ಈ ತನಿಖೆಯಲ್ಲಿ ಪ್ರಸ್ತುತ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ತನಿಖಾ ತಂಡವು ಆರೋಪಿಗಳಿಗೆ ಸೇರಿದ ಬ್ಯಾಂಕ್ ಖಾತೆಗಳು, ಲಾಕರ್‌ಗಳು ಹಾಗೂ ಡಿಮ್ಯಾಟ್ ಖಾತೆಗಳನ್ನು ಜಪ್ತಿ ಮಾಡಿದ್ದು, ಭಾರತಿಯ ನ್ಯಾಯ ಸಂಹಿತೆ (BNS) ಹಾಗೂ ಸಾರ್ವಜನಿಕ ಪರೀಕ್ಷಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ : “ನನ್ನ ಹಾಗೂ ಬ್ಯಾಟ್‌ಮ್ಯಾನ್ ಅನ್ನು ಯಾರೂ ಒಂದೇ ರೂಮ್‌ನಲ್ಲಿ ನೋಡಿಲ್ಲ” : ರಾಹುಲ್ ಗಾಂಧಿ!



















