ಡೆಹ್ರಾಡೂನ್ : ಪವಿತ್ರ ಚಾರ್ ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಧಾಮದ ಕಾಣಿಕೆ ಮತ್ತು ದೇಣಿಗೆ ನಿಧಿ ದುರುಪಯೋಗ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಇಂದು ದೇಗುಲದ ಕಾಣಿಕೆ ಮತ್ತು ದೇಣಿಗೆ ಅಧಿಕಾರಿಯಾಗಿದ್ದ ಪ್ರಮೋದ್ ನೌಟಿಯಾಲ್‌ನನ್ನು ಡೆಹ್ರಾಡೂನ್‌ನಲ್ಲಿ ಬಂಧಿಸಿದ್ದಾರೆ.
ತನಿಖೆಯ ಭಾಗವಾಗಿ ಆತನನ್ನು ತಡರಾತ್ರಿ ಬದರಿನಾಥಕ್ಕೆ ಕರೆತರಲಾಗಿತ್ತು. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಬದರಿನಾಥ ದೇವಾಲಯಕ್ಕೆ ಹರಿದು ಬರುವ ದೇಣಿಗೆ ಮತ್ತು ಕಾಣಿಕೆಗಳ ಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವುದು ಈ ತನಿಖೆಯಿಂದ ಬಹಿರಂಗಗೊಂಡಿದೆ.
ಜುಲೈ 2 ರಂದು ನಡೆದ ದೇಗುಲದ ‘ಥಾಲಿ ಕಾಣಿಕೆ’ ಎಣಿಕೆಯ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ದೇವಾಲಯದ ಆಡಳಿತ ಮಂಡಳಿಯ ಆಂತರಿಕ ವಿಚಾರಣೆಯಿಂದ ಮೊದಲು ಪತ್ತೆಯಾಗಿತ್ತು. ಕಾಣಿಕೆ ಎಣಿಕೆ ಮಾಡುವ ವಿಶೇಷ ಕೊಠಡಿಯಿಂದಲೇ ಭಕ್ತರು ಸಮರ್ಪಿಸಿದ್ದ ನಗದು ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ವ್ಯವಸ್ಥಿತವಾಗಿ ಎಗರಿಸಲಾಗಿತ್ತು ಎಂದು ಪ್ರಾಥಮಿಕ ತನಿಖಾ ವರದಿಗಳು ತಿಳಿಸಿವೆ. ಈ ಇಲಾಖಾ ವಿಚಾರಣೆಯ ವರದಿ ಆಧರಿಸಿ ಪೊಲೀಸರು ಪ್ರಥಮ ಮಾಹಿತಿ ವರದಿ (FIR) ದಾಖಲಿಸಿಕೊಂಡ ಬಳಿಕ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು.
ನ್ಯಾಯಾಲಯದ ಮೆಟ್ಟಿಲೇರಿದ್ದ ಆರೋಪಿ
ತನ್ನ ವಿರುದ್ಧ ಇಲಾಖಾ ತನಿಖೆ ನಡೆದು ಅಮಾನತು ಆದೇಶ ಹೊರಬೀಳುತ್ತಿದ್ದಂತೆಯೇ ಮತ್ತು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅಧಿಕಾರಿ ಪ್ರಮೋದ್ ನೌಟಿಯಾಲ್ ಕಾನೂನು ರಕ್ಷಣೆ ಪಡೆಯಲು ಯತ್ನಿಸಿದ್ದ. ತನ್ನ ಮೇಲಿನ ಅಮಾನತು ಆದೇಶ ಮತ್ತು ಎಫ್‌ಐಆರ್ ಅನ್ನು ಪ್ರಶ್ನಿಸಿ ಆತ ಉತ್ತರಾಖಂಡ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆದರೆ, ಆತನ ವಿರುದ್ಧದ ಸಾಕ್ಷ್ಯಗಳು ಬಲವಾಗಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ಅಂತಿಮವಾಗಿ ಆತನನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಹಣದ ಚಲಾವಣೆ ಮತ್ತು ದೇವಾಲಯದ ಒಳಗಿನ ಭದ್ರತಾ ಲೋಪಗಳ ಕುರಿತು ಅಧಿಕಾರಿಗಳು ಈಗ ನೌಟಿಯಾಲ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಿದ್ದ ಆರೋಪಿ
ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆ ಹಾಗೂ ನಂಬಿಕೆಗೆ ಒಳಪಟ್ಟಿರುವ ಬದರಿನಾಥ ದೇಗುಲದಲ್ಲೇ ಇಂತಹ ವಂಚನೆ ನಡೆದಿರುವುದು ಕೇವಲ ಹಣಕಾಸು ಅಪರಾಧವಾಗಿ ಉಳಿದಿಲ್ಲ, ಬದಲಿಗೆ ಸಾರ್ವಜನಿಕರು ಹಾಗೂ ಭಕ್ತಾದಿಗಳ ವಿಶ್ವಾಸಕ್ಕೆ ಧಕ್ಕೆ ತಂದಿರುವ ಗಂಭೀರ ವಿಷಯವಾಗಿ ಮಾರ್ಪಟ್ಟಿದೆ.
ಈ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರು ಹಾಗೂ ಜನಪ್ರತಿನಿಧಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯ ಹೇರಿದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಉತ್ತರಾಖಂಡ ಸರ್ಕಾರ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಪ್ರಮೋದ್ ನೌಟಿಯಾಲ್ ಮೇಲಿರುವ ಆರೋಪಗಳು ಗಂಭೀರವಾಗಿದ್ದು, ತನಿಖೆ ಪ್ರಗತಿಯಲ್ಲಿದ್ದಂತೆ ದೇವಾಲಯದ ಆಡಳಿತ ಮಂಡಳಿಯ ಇನ್ನೂ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಎಸ್‌ಐಟಿ ಬಲೆಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಅಯೋಧ್ಯೆಯ ರಾಮಮಂದಿರದ ದೇಣಿಗೆ ಅಕ್ರಮ ಪ್ರಕರಣದ ಬೆನ್ನಲ್ಲೇ ಬದರಿನಾಥ ಪ್ರಕರಣವೂ ಬಹಿರಂಗವಾಗಿತ್ತು.
ಇದನ್ನೂ ಓದಿ : ರಾಜ್ಯಸಭೆಯಲ್ಲಿ ಬಹುಮತಕ್ಕೆ ಇನ್ನು ಆರೇ ಸ್ಥಾನ ಬಾಕಿ : ಬಂಗಾಳದ ಬಲದೊಂದಿಗೆ ಐತಿಹಾಸಿಕ ಮೈಲಿಗಲ್ಲಿನತ್ತ ಬಿಜೆಪಿ



















