ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿರುವ ಪ್ರಸಿದ್ದ ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಕೆಲ ಪ್ರವಾಸಿಗರು ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿ ಮೋಜು-ಮಸ್ತಿ ಮಾಡಿರುವ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ದೇಗುಲದ ಆವರಣದಲ್ಲೇ ಹುಚ್ಚಾಟ ಪ್ರದರ್ಶಿಸಿದ್ದಕ್ಕೆ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಕೆಲವರು ಚಪ್ಪಲಿ ಧರಿಸಿಯೇ ದೇಗುಲದ ಆವರಣ ಪ್ರವೇಶಿಸಿರುವುದು ಕೂಡ ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಇದೇ ಸ್ಥಳದಲ್ಲಿ ಫೋಟೋಶೂಟ್ ವಿಚಾರವಾಗಿ ಸ್ಥಳೀಯರು ಮತ್ತು ಫೋಟೋಗ್ರಾಫರ್‌ಗಳ ನಡುವೆ ಗಲಾಟೆ ನಡೆದಿದ್ದ ಹಿನ್ನೆಲೆ ಜಿಲ್ಲಾಡಳಿತ ಪ್ರವಾಸಿಗರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿತ್ತು.
ದೇಗುಲದ ಆವರಣಕ್ಕೆ ಚಪ್ಪಲಿ ಧರಿಸಿ ಪ್ರವೇಶಿಸಬಾರದು ಸೇರಿದಂತೆ ಹಲವು ಸೂಚನೆಗಳನ್ನು ಜಿಲ್ಲಾಡಳಿತ ನೀಡಿದ್ದರೂ, ಅವನ್ನು ಲೆಕ್ಕಿಸದೆ ಪ್ರವಾಸಿಗರು ವರ್ತಿಸಿರುವ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತದ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ದೇಗುಲದ ಪಾವಿತ್ರ್ಯ ಕಾಪಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಜ್ಯಸಭೆಯಲ್ಲಿ ಬಹುಮತಕ್ಕೆ ಇನ್ನು ಆರೇ ಸ್ಥಾನ ಬಾಕಿ : ಬಂಗಾಳದ ಬಲದೊಂದಿಗೆ ಐತಿಹಾಸಿಕ ಮೈಲಿಗಲ್ಲಿನತ್ತ ಬಿಜೆಪಿ



















