ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆಗೆ ಈಗಾಗಲೇ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಮಾಡಲಾಗುತ್ತಿದೆ. ರೈತರ ಈ ತೀವ್ರ ವಿರೋಧದ ನಡುವೆಯೂ ಇಂದು ಜಂಟಿ ಅಳತೆ ಕಾರ್ಯಕ್ಕೆ (ಜೆಎಂಸಿ) ಮುಂದಾದ ಅಧಿಕಾರಿಗಳ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮಸ್ಥರು ಸಿಡಿದೆದಿದ್ದಾರೆ.
ಸರ್ವೆ ಕಾರ್ಯ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಎರಡು ಕಾರುಗಳನ್ನೂ ಜಖಂಗೊಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಇಂದು ಅಧಿಕಾರಿಗಳು ಸರ್ವೆಗೆ ಆಗಮಿಸಿದ್ದರು. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ವಿರೋಧದ ನಡುವೆಯೂ ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಇಟ್ಟಿಗೆಯಿಂದ ಹೊಡೆದು ಎರಡು ಕಾರಿನ ಗ್ಲಾಸ್‌ಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ‘ಯಾವುದೇ ಕಾರಣಕ್ಕೂ ಸರ್ವೆ ಕಾರ್ಯ ನಡೆಸಬಾರದು’ ಎಂದು ಪಟ್ಟುಹಿಡಿಯಲಾಗಿದ್ದು, ಈ ವೇಳೆ ರೈತ ಮುಖಂಡರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು, ಅಧಿಕಾರಿಗಳನ್ನು ತಮ್ಮ ಭದ್ರತೆಯಲ್ಲಿ ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಂಡಲಹಳ್ಳಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ಚಾಕು ಇರಿದು ಪ್ರೇಯಸಿಯ ಹತ್ಯೆಗೈದು ರೈಲಿಗೆ ತಲೆಕೊಟ್ಟು ಟೆಕ್ಕಿ ಆತ್ಮಹತ್ಯೆ!


















