ಉಡುಪಿ : ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದ ರೈತರ ನಿಯೋಗವು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಹಲವು ಪ್ರಮುಖ ವಿಷಯಗಳ ಕುರಿತು ಮನವಿ ಸಲ್ಲಿಸಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಆಗ್ರಹಿಸಿ ರೈತರು ಕಳೆದ 292 ದಿನಗಳಿಂದ ತಾಲೂಕು ಆಡಳಿತ ಕಚೇರಿ ಎದುರು ನಿರಂತರ ಧರಣಿ ನಡೆಸುತ್ತಿರುವ ಬಗ್ಗೆ ಸಚಿವರಿಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.

ರೈತರ ಮನವಿಯನ್ನು ಆಲಿಸಿದ ಸಚಿವ ಯು.ಟಿ. ಖಾದರ್ ಅವರು, ಸ್ಥಳದಲ್ಲೇ ರಾಜ್ಯ ಅಧೀನ ಕಾರ್ಯದರ್ಶಿಯೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದಾರೆ. ಬಳಿಕ ಸರ್ಕಾರದ ಮಟ್ಟದಲ್ಲೂ ವಿಷಯವನ್ನು ಪರಿಶೀಲಿಸಿ ರೈತರ ಹೋರಾಟಕ್ಕೆ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಇದೇ ವೇಳೆ ಬೈಂದೂರು ತಾಲೂಕಿಗೆ ಸರ್ಕಾರಿ ತಾಲೂಕು ಆಸ್ಪತ್ರೆ ಮಂಜೂರು ಮಾಡುವಂತೆ ಸಲ್ಲಿಸಿದ ಮನವಿಗೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೈಂದೂರು ವ್ಯಾಪಕ ಗ್ರಾಮೀಣ ಪ್ರದೇಶವನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ದೊರಕಲು ತಾಲೂಕು ಆಸ್ಪತ್ರೆ ಅತ್ಯಗತ್ಯವಾಗಿದೆ. ಆದ್ದರಿಂದ ಶೀಘ್ರದಲ್ಲೇ ಬೈಂದೂರಿಗೆ ತಾಲೂಕು ಆಸ್ಪತ್ರೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ರಕ್ಷಾ ಸಮಿತಿ ಪರವಾಗಿ ವೀರಭದ್ರ ಅವರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಸಭೆಯಲ್ಲಿ ಅರುಣ್ ಕುಮಾರ್ ಶಿರೂರು, ಮ್ಯಾಥ್ಯೂ ಗಣೇಶ್ ಪೂಜಾರಿ, ಶಬ್ಬೀರ್ ನೂರ್ ಮಹಮ್ಮದ್, ದೇವಪ್ಪ ಮರಾಠಿ, ಸುಧೀರ್ ಪೂಜಾರಿ, ಸಿದ್ದೂಕ್ ವಾಸು ಮರಾಠಿ, ಮಹಾದೇವ ಪೂಜಾರಿ, ಹೆರಿಯ ಗೋಳಿಬೇರು ಪದ್ಮಾಕ್ಷ, ಕೇಶವ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ : ರಾಜ್ಯ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು!


















