ಬೆಂಗಳೂರು : 2026-27ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಕುರಿತಾಗಿ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿದೆ. ಆದರೆ, ಪರೀಕ್ಷೆ ನಡೆಸುವ National Testing Agency (ಎನ್‌ಟಿಎ) ಈ ಆರೋಪಗಳನ್ನು ತಳ್ಳಿಹಾಕಿದ್ದು, ಪರೀಕ್ಷೆಯನ್ನು ಸಂಪೂರ್ಣ ಭದ್ರತಾ ಕ್ರಮಗಳೊಂದಿಗೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ರಾಜಸ್ಥಾನ ಪೊಲೀಸರ ವಿಶೇಷ ತನಿಖಾ ತಂಡವು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದು, ಸತ್ಯಾಸತ್ಯತೆ ಪರಿಶೀಲನೆ ನಡೆಯುತ್ತಿದೆ.
ಏನಿದು ವಿವಾದ?
ಪರೀಕ್ಷೆಗೆ ಕೆಲವು ದಿನಗಳ ಮೊದಲು ಸುಮಾರು 400 ಪ್ರಶ್ನೆಗಳಿರುವ ಪ್ರಶ್ನಾ ಸೆಟ್‌ಗಳು ಕೆಲ ವಿದ್ಯಾರ್ಥಿಗಳಿಗೆ ವಿತರಿಸಲ್ಪಟ್ಟಿದ್ದವು ಎಂಬ ಆರೋಪ ಕೇಳಿಬಂದಿದೆ. ಈ ಪೈಕಿ ಜೀವವಿಜ್ಞಾನ ಮತ್ತು ರಸಾಯನವಿಜ್ಞಾನ ವಿಭಾಗದ 100ಕ್ಕೂ ಹೆಚ್ಚು ಪ್ರಶ್ನೆಗಳು ಅಸಲಿ NEET-UG ಪ್ರಶ್ನೆಪತ್ರಿಕೆಯ ಪ್ರಶ್ನೆಗಳೊಂದಿಗೆ ಹೋಲಿಕೆ ಹೊಂದಿವೆ ಎನ್ನಲಾಗಿದೆ. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆಯ ಶಂಕೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಎನ್‌ಟಿಎ ನೀಡಿದ ಸ್ಪಷ್ಟನೆ:
ಎನ್‌ಟಿಎ ಪ್ರಕಾರ, ಮೇ 3ರಂದು ನಡೆದ NEET-UG ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯಡಿ ನಡೆಸಲಾಗಿದೆ.
ಎನ್‌ಟಿಎ ಹೇಳುವಂತೆ ಪ್ರಶ್ನೆಪತ್ರಿಕೆಗಳನ್ನು GPS ಟ್ರ್ಯಾಕಿಂಗ್ ಹೊಂದಿದ ವಾಹನಗಳಲ್ಲಿ ಸಾಗಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ AI ಆಧಾರಿತ ಸಿಸಿಟಿವಿ ನಿಗಾವ್ಯವಸ್ಥೆ ಅಳವಡಿಸಲಾಗಿತ್ತು. ಅಭ್ಯರ್ಥಿಗಳ ಬಯೋಮೆಟ್ರಿಕ್ ಪರಿಶೀಲನೆ ನಡೆಸಲಾಗಿತ್ತು. 5G ಜಾಮರ್‌ಗಳನ್ನು ಬಳಸಿ ಎಲೆಕ್ಟ್ರಾನಿಕ್ ಸಂಪರ್ಕ ನಿರ್ಬಂಧಿಸಲಾಗಿತ್ತು. ಪರೀಕ್ಷೆ ಮುಗಿದ ನಾಲ್ಕು ದಿನಗಳ ಬಳಿಕ, ಮೇ 7ರಂದು ಅಕ್ರಮದ ಬಗ್ಗೆ ಮಾಹಿತಿ ಲಭಿಸಿದೆ ಎಂದು ಎನ್‌ಟಿಎ ತಿಳಿಸಿದೆ.
ತಕ್ಷಣವೇ ಕೇಂದ್ರ ತನಿಖಾ ಸಂಸ್ಥೆಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದ್ದು, ತನಿಖೆಗೆ ಅಗತ್ಯವಿರುವ ಎಲ್ಲಾ ಪರೀಕ್ಷಾ ದತ್ತಾಂಶ ಮತ್ತು ತಾಂತ್ರಿಕ ನೆರವನ್ನು ಒದಗಿಸಲಾಗುತ್ತಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಪರೀಕ್ಷೆ ರದ್ದುಪಡಿಸುವ ಚರ್ಚೆ:
ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಪರೀಕ್ಷೆ ರದ್ದುಪಡಿಸುವ ಕುರಿತು ಚರ್ಚೆಗಳು ಜೋರಾಗಿವೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ : ‘ಟಿವಿಕೆ’ ಸರ್ಕಾರಕ್ಕೆ AIADMK ಬಂಡಾಯ ಬಣದ ಬೆಂಬಲ


















