ನವದೆಹಲಿ : ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶ ನಿಗದಿತ ಮಿತಿಗಿಂತ ಹೆಚ್ಚಿರುವ ಪ್ಯಾಕೆಟ್ ಆಹಾರಗಳ ಮೇಲೆ ಗ್ರಾಹಕರಿಗೆ ಎಚ್ಚರಿಕೆ ನೀಡುವ ಕೆಂಪು ಚಿಹ್ನೆ ಅಳವಡಿಸುವ ಪ್ರಸ್ತಾವವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಆದರೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲು 2028ರ ಜುಲೈವರೆಗೂ ಸಮಯ ಬೇಕಾಗಬಹುದು ಎಂದು ಪ್ರಾಧಿಕಾರ ತಿಳಿಸಿದೆ.
ಪ್ಯಾಕೆಟ್ ಆಹಾರಗಳ ಮುಂಭಾಗದಲ್ಲಿ ಪೌಷ್ಟಿಕಾಂಶದ ಎಚ್ಚರಿಕೆ ಸೂಚಿಸುವ ವ್ಯವಸ್ಥೆ ಜಾರಿಗೆ ತರುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೇಳಿದ್ದ ಪ್ರಶ್ನೆಗಳಿಗೆ ಎಫ್‌ಎಸ್‌ಎಸ್‌ಐಎ ಉತ್ತರ ಸಲ್ಲಿಸಿದೆ. ಸೆಪ್ಟೆಂಬರ್ 23ರಂದು ಸಲ್ಲಿಸಿರುವ 43 ಪುಟಗಳ ಪ್ರಮಾಣಪತ್ರದಲ್ಲಿ ಎಚ್ಚರಿಕೆ ಚಿಹ್ನೆಯ ವಿನ್ಯಾಸ, ಯಾವ ಪೌಷ್ಟಿಕಾಂಶಗಳನ್ನು ಪರಿಗಣಿಸಬೇಕು, ಅವುಗಳ ಪ್ರಮಾಣವನ್ನು ಹೇಗೆ ಲೆಕ್ಕ ಹಾಕಬೇಕು ಹಾಗೂ ಹೊಸ ನಿಯಮವನ್ನು ಜಾರಿಗೆ ತರಲು ಬೇಕಾಗುವ ಸಮಯ ಸೇರಿದಂತೆ ಹಲವು ಅಂಶಗಳನ್ನು ವಿವರಿಸಲಾಗಿದೆ.
ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಗುರುತಿನ ಎಚ್ಚರಿಕೆ
ಎಫ್‌ಎಸ್‌ಎಸ್‌ಐಎ ಪ್ರಸ್ತಾಪಿಸಿರುವ ವ್ಯವಸ್ಥೆಯ ಪ್ರಕಾರ, ಪ್ಯಾಕೆಟ್‌ನ ಮುಂಭಾಗದ ಮೇಲ್ಭಾಗದಲ್ಲಿ ಕೆಂಪು ಬಣ್ಣದ ಷಟ್ಕೋನಾಕಾರದ ಎಚ್ಚರಿಕೆ ಚಿಹ್ನೆ ಇರಲಿದೆ. ಆಹಾರದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬು ಇದ್ದರೆ, ಅದಕ್ಕೆ ಅನುಗುಣವಾಗಿ ಎಚ್ಚರಿಕೆ ನೀಡಲಾಗುತ್ತದೆ.
ಈ ಹಿಂದೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪೌಷ್ಟಿಕಾಂಶಗಳ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿದ್ದಾಗ ಮಾತ್ರ ಎಚ್ಚರಿಕೆ ನೀಡುವ ಎರಡು ಹಂತದ ವ್ಯವಸ್ಥೆಯನ್ನು ಪರಿಗಣಿಸಲಾಗಿತ್ತು. ಇದೀಗ ಆ ವಿಧಾನದಲ್ಲಿ ಬದಲಾವಣೆ ತರಲು ಪ್ರಸ್ತಾಪಿಸಲಾಗಿದೆ. ಯಾವುದೇ ಒಂದು ಪೌಷ್ಟಿಕಾಂಶದ ಪ್ರಮಾಣವೇ ನಿಗದಿತ ಮಿತಿಗಿಂತ ಹೆಚ್ಚಿದ್ದರೂ ಉತ್ಪನ್ನದ ಮೇಲೆ ಎಚ್ಚರಿಕೆ ಚಿಹ್ನೆ ಕಾಣಿಸಿಕೊಳ್ಳುವ ಏಕ ಹಂತದ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಯಾವ ಸಕ್ಕರೆಯನ್ನು ಲೆಕ್ಕ ಹಾಕಲಾಗುತ್ತದೆ?
ಎಚ್ಚರಿಕೆ ಚಿಹ್ನೆ ಅಳವಡಿಸುವಾಗ ಆಹಾರದಲ್ಲಿರುವ ಒಟ್ಟು ಸಕ್ಕರೆಯ ಪ್ರಮಾಣವನ್ನು ಪರಿಗಣಿಸಬೇಕೇ ಅಥವಾ ಆಹಾರ ತಯಾರಿಸುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಸೇರಿಸುವ ಸಕ್ಕರೆಯನ್ನು ಮಾತ್ರ ಪರಿಗಣಿಸಬೇಕೇ ಎಂಬುದೂ ಪ್ರಮುಖ ಪ್ರಶ್ನೆಯಾಗಿದೆ. ಎಫ್‌ಎಸ್‌ಎಸ್‌ಐಎ ವಿವರಣೆಯ ಪ್ರಕಾರ, ಹಣ್ಣು ಹಾಗೂ ಹಾಲಿನಂತಹ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆಯ ಜತೆಗೆ ಇತರ ಪೌಷ್ಟಿಕಾಂಶಗಳೂ ಇರುತ್ತವೆ. ಆದರೆ ಆಹಾರ ತಯಾರಿಸುವಾಗ ಹೆಚ್ಚುವರಿಯಾಗಿ ಸೇರಿಸುವ ಸಕ್ಕರೆ ಹೆಚ್ಚಿನ ಪ್ರಮಾಣದ ಕ್ಯಾಲೊರಿ ಒದಗಿಸುತ್ತದೆ. ಹೀಗಾಗಿ ಎಚ್ಚರಿಕೆ ಸೂಚಿಸುವ ವ್ಯವಸ್ಥೆಯಲ್ಲಿ ಸೇರಿಸಲಾದ ಸಕ್ಕರೆಯ ಪ್ರಮಾಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಸ್ಯಾಚುರೇಟೆಡ್ ಕೊಬ್ಬಿನ ವಿಚಾರದಲ್ಲಿಯೂ ಪ್ರಾಧಿಕಾರ ತನ್ನ ನಿಲುವನ್ನು ವಿವರಿಸಿದೆ. 2024ರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಆಹಾರ ಮಾರ್ಗಸೂಚಿಗಳಲ್ಲಿ 100 ಗ್ರಾಂ ಆಹಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಿತಿ ಇಲ್ಲದಿರುವ ಹಿನ್ನೆಲೆಯಲ್ಲಿ ಅದನ್ನು ಮುಂಭಾಗದ ಎಚ್ಚರಿಕೆ ಸೂಚಕದಲ್ಲಿ ಸೇರಿಸಲಾಗಿಲ್ಲ ಎಂದು ತಿಳಿಸಲಾಗಿದೆ.
ನಿಯಮ ಜಾರಿಗೆ ಇನ್ನೂ ಎರಡು ವರ್ಷ?
ಹೊಸ ಎಚ್ಚರಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸಲು ಸುಮಾರು ನಾಲ್ಕು ತಿಂಗಳು ಬೇಕಾಗಬಹುದು ಎಂದು ಎಫ್‌ಎಸ್‌ಎಸ್‌ಐಎ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ವಿಶ್ವ ವ್ಯಾಪಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಅಭಿಪ್ರಾಯಗಳನ್ನು ಪಡೆಯಲು 60 ದಿನಗಳ ಕಾಲಾವಕಾಶವೂ ಇರಲಿದೆ. ನಿಯಮ ಅಂತಿಮಗೊಂಡ ಬಳಿಕ ಆಹಾರ ಉತ್ಪಾದನಾ ಸಂಸ್ಥೆಗಳಿಗೆ ಹೊಸ ಪ್ಯಾಕೇಜಿಂಗ್ ವ್ಯವಸ್ಥೆಗೆ ಬದಲಾವಣೆಯಾಗಲು 365 ದಿನಗಳ ಕಾಲಾವಕಾಶ ನೀಡುವ ಪ್ರಸ್ತಾವವಿದೆ. ಈಗಾಗಲೇ ಮುದ್ರಿಸಿರುವ ಪ್ಯಾಕೇಜಿಂಗ್ ಸಾಮಗ್ರಿಗಳು ವ್ಯರ್ಥವಾಗದಂತೆ ನೋಡಿಕೊಳ್ಳಲು ಈ ಪರಿವರ್ತನಾ ಅವಧಿ ಅಗತ್ಯ ಎಂದು ಪ್ರಾಧಿಕಾರ ತಿಳಿಸಿದೆ.
ಈ ಪ್ರಕ್ರಿಯೆಯನ್ನು ಗಮನಿಸಿದರೆ, ಹೊಸ ಎಚ್ಚರಿಕೆ ಚಿಹ್ನೆ ಕಡ್ಡಾಯವಾಗಿ ಪ್ಯಾಕೆಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಮಯ 2028ರ ಜುಲೈವರೆಗೂ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಆದರೆ ಅಂತಿಮ ಜಾರಿಗೆ ಸಂಬಂಧಿಸಿದ ದಿನಾಂಕವನ್ನು ಎಫ್‌ಎಸ್‌ಎಸ್‌ಐಎ ಇನ್ನೂ ನಿಗದಿಪಡಿಸಿಲ್ಲ.
ಅತಿ ಹೆಚ್ಚು ಸಂಸ್ಕರಿಸಿದ ಆಹಾರ’ಕ್ಕೆ ಪ್ರತ್ಯೇಕ ಮಾನದಂಡವಿಲ್ಲ
ಆಹಾರ ಪದಾರ್ಥ ಎಷ್ಟರ ಮಟ್ಟಿಗೆ ಸಂಸ್ಕರಣೆಗೆ ಒಳಗಾಗಿದೆ ಎಂಬುದನ್ನು ಮುಂಭಾಗದ ಎಚ್ಚರಿಕೆ ಚಿಹ್ನೆ ನಿರ್ಧರಿಸುವಾಗ ಪ್ರತ್ಯೇಕ ಮಾನದಂಡವಾಗಿ ಪರಿಗಣಿಸಲಾಗುವುದಿಲ್ಲ ಎಂದು ಎಫ್‌ಎಸ್‌ಎಸ್‌ಐಎ ಸ್ಪಷ್ಟಪಡಿಸಿದೆ. ಆಹಾರದಲ್ಲಿ ಇರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವೇ ಮುಖ್ಯ ಮಾನದಂಡವಾಗಿರಲಿದೆ. ಅಂದರೆ, ಆಹಾರ ಅತಿ ಹೆಚ್ಚು ಸಂಸ್ಕರಿಸಲ್ಪಟ್ಟಿದೆಯೇ ಅಥವಾ ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಲ್ಪಟ್ಟಿದೆಯೇ ಎಂಬುದಕ್ಕಿಂತ ಅದರಲ್ಲಿರುವ ನಿರ್ದಿಷ್ಟ ಪೌಷ್ಟಿಕಾಂಶಗಳ ಪ್ರಮಾಣಕ್ಕೆ ಅನುಗುಣವಾಗಿ ಎಚ್ಚರಿಕೆ ನೀಡಲಾಗುತ್ತದೆ.
ಶಾಲೆಗಳಲ್ಲೂ ಪೌಷ್ಟಿಕಾಂಶ ಶಿಕ್ಷಣ
ಪ್ಯಾಕೆಟ್ ಆಹಾರಗಳ ಮೇಲಿರುವ ಪೌಷ್ಟಿಕಾಂಶದ ಮಾಹಿತಿಯನ್ನು ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡಲು ಶಾಲಾ ಹಂತದಲ್ಲೇ ಪೌಷ್ಟಿಕಾಂಶ ಶಿಕ್ಷಣವನ್ನು ಪರಿಚಯಿಸುವ ಅಗತ್ಯವಿದೆ ಎಂದು ಎಫ್‌ಎಸ್‌ಎಸ್‌ಐಎ ಅಭಿಪ್ರಾಯಪಟ್ಟಿದೆ. ಆಹಾರ ಪ್ಯಾಕೆಟ್‌ಗಳ ಮೇಲಿರುವ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳುವ ವಿಧಾನವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂತೆ ಶಿಕ್ಷಣ ಸಚಿವಾಲಯ ಹಾಗೂ ಸಿಬಿಎಸ್‌ಇಗೆ ಪತ್ರ ಬರೆದಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಆದರೆ ಈ ಪ್ರಸ್ತಾವನೆ ಕುರಿತು ಅಂತಿಮ ನಿರ್ಧಾರವಾಗಿಲ್ಲ.
ಗ್ರಾಹಕರಿಗೆ ಮಾಹಿತಿ ನೀಡುವ ಉದ್ದೇಶ
ಪ್ಯಾಕೆಟ್ ಆಹಾರ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಅದರಲ್ಲಿರುವ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಪ್ರಮಾಣದ ಬಗ್ಗೆ ಸುಲಭವಾಗಿ ತಿಳಿದುಕೊಳ್ಳುವಂತೆ ಮಾಡುವುದು ಈ ಎಚ್ಚರಿಕೆ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ. ಪ್ಯಾಕೆಟ್‌ನ ಮುಂಭಾಗದಲ್ಲೇ ಸ್ಪಷ್ಟವಾದ ಸೂಚನೆ ದೊರೆತರೆ, ಉತ್ಪನ್ನವನ್ನು ಖರೀದಿಸುವ ಮೊದಲು ಗ್ರಾಹಕರು ಪೌಷ್ಟಿಕಾಂಶದ ಮಾಹಿತಿಯನ್ನು ಗಮನಿಸಲು ಸಾಧ್ಯವಾಗಲಿದೆ.
ಹೊಸ ನಿಯಮದ ಜಾರಿಗೆ ಸಂಬಂಧಿಸಿದಂತೆ ಇನ್ನೂ ಹಲವು ಹಂತಗಳು ಬಾಕಿ ಇರುವುದರಿಂದ, ಕೆಂಪು ಎಚ್ಚರಿಕೆ ಚಿಹ್ನೆ ಯಾವ ದಿನದಿಂದ ದೇಶಾದ್ಯಂತ ಕಡ್ಡಾಯವಾಗಲಿದೆ ಎಂಬುದು ಅಂತಿಮವಾಗಿ ಸ್ಪಷ್ಟವಾಗಿಲ್ಲ. ಈ ಕುರಿತು ಎಫ್‌ಎಸ್‌ಎಸ್‌ಐಎ ಸಲ್ಲಿಸಿರುವ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದ್ದು, ಮುಂದಿನ ವಿಚಾರಣೆಯಲ್ಲಿ ನಿಯಮದ ಜಾರಿ ಹಾಗೂ ಅದರ ಕಾಲಮಿತಿಯ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ ; ಗಿಲ್ ನಾಯಕತ್ವಕ್ಕೆ ಕೊಹ್ಲಿ-ರೋಹಿತ್ ಬಲ ; 2027ರ ವಿಶ್ವಕಪ್‌ಗೂ ಮುನ್ನ ಗಂಭೀರ್ ಮಹತ್ವದ ಮಾತು



















