ರಾಯಚೂರು : ಚಲಿಸುತ್ತಿದ್ದ ಸಾರಿಗೆ ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸುಣಕಲ್ ಗ್ರಾಮದ ಬಳಿ ನಡೆದಿದೆ.
ಬಸ್‌ನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯಪುರ ಜಿಲ್ಲೆಯ ನಾಲತವಾಡದಿಂದ ಲಿಂಗಸಗೂರಿಗೆ ಬರುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಸೇರಿದ ಬಸ್ ಸುಣಕಲ್ ಗ್ರಾಮದ ಬಳಿ ಬರುತ್ತಿದ್ದಂತೆ ತಾಂತ್ರಿಕ ದೋಷದಿಂದಾಗಿ ಏಕಾಏಕಿ ಸ್ಟೇರಿಂಗ್ ಕಟ್ ಆಗಿದ್ದು, ತಕ್ಷಣ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ.
ಸ್ಟೇರಿಂಗ್ ಕಟ್ ಆದ ಕ್ಷಣದಲ್ಲೇ ಚಾಲಕ ಬಸ್ಸನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು, ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಬಸ್‌ನಲ್ಲಿದ್ದ 40 ಪ್ರಯಾಣಿಕರ ಪೈಕಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಚಿನ್ನ ಖರೀದಿಗೆ ಹೋದವನಿಂದ 2 ಕೋಟಿ ಹಣ ಪಡೆದು ವಂಚನೆ – ಈ ಖತರ್ನಾಕ್ ಲೇಡಿ ಮಾಡಿದ್ದೇನು ಗೊತ್ತಾ?


















