ನವದೆಹಲಿ : ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿಯಿಂದ ರಿಲೀಫ್ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಾಳೆ ಎಣ್ಣೆ (ಪಾಮ್ ಆಯಿಲ್), ಸೋಯಾಬೀನ್ ಮತ್ತು ಸೂರ್ಯಕಾಂತಿ ಸೇರಿದಂತೆ ಪ್ರಮುಖ ಖಾದ್ಯ ತೈಲಗಳ ಮೇಲಿನ ಮೂಲ ಆಮದು ಸುಂಕವನ್ನು (ಬೇಸಿಕ್ ಕಸ್ಟಮ್ಸ್ ಡ್ಯೂಟಿ) ಕೇಂದ್ರ ಸರ್ಕಾರ ಗಣನೀಯವಾಗಿ ಕಡಿತಗೊಳಿಸಿದೆ. ಹಾಗಾಗಿ, ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಹೊಸ ಆದೇಶದ ಪ್ರಕಾರ, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲಾಗಿದೆ. ಸಂಸ್ಕರಿಸಿದ (ರಿಫೈನ್ಡ್) ಸೂರ್ಯಕಾಂತಿ ಎಣ್ಣೆಯ ಸುಂಕವನ್ನು ಶೇ.32.5 ರಿಂದ 22.5 ಕ್ಕೆ ತಗ್ಗಿಸಲಾಗಿದೆ. ಅದೇ ರೀತಿ, ಕಚ್ಚಾ ಪಾಮ್ ಆಯಿಲ್ ಮತ್ತು ಕಚ್ಚಾ ಸೋಯಾಬೀನ್ ಎಣ್ಣೆಯ ಮೇಲಿನ ಸುಂಕವನ್ನು ಶೇ.10 ರಿಂದ 5 ಕ್ಕೆ ಇಳಿಸಲಾಗಿದ್ದು, ಸಂಸ್ಕರಿಸಿದ ಪಾಮ್ ಮತ್ತು ಸೋಯಾಬೀನ್ ಎಣ್ಣೆಯ ಸುಂಕವನ್ನು ಶೇ.32.5 ರಿಂದ 27.5ಕ್ಕೆ ತಗ್ಗಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಶೇ.20 ರಷ್ಟು ಹೆಚ್ಚಾಗಿತ್ತು. ಇದರಿಂದಾಗಿ ಹಬ್ಬದ ಸಮಯದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಭೀತಿ ಎದುರಾಗಿತ್ತು. ಭಾರತವು ತನ್ನ ಒಟ್ಟು ಖಾದ್ಯ ತೈಲದ ಅಗತ್ಯತೆಯ ಸುಮಾರು ಮೂರನೇ ಎರಡರಷ್ಟು (60% ಕ್ಕೂ ಹೆಚ್ಚು) ಭಾಗವನ್ನು ಮಲೇಷ್ಯಾ, ಇಂಡೋನೇಷ್ಯಾ, ಅರ್ಜೆಂಟೀನಾ ಮತ್ತು ರಷ್ಯಾಗಳಿಂದ ಆಮದು ಮಾಡಿಕೊಳ್ಳುತ್ತದೆ.
ಸರ್ಕಾರದ ಈ ನಿರ್ಧಾರದಿಂದಾಗಿ ಆಮದು ವೆಚ್ಚ ಕಡಿಮೆಯಾಗಲಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಚಿಲ್ಲರೆ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ. ಇದು ದಸರಾ ಹಾಗೂ ದೀಪಾವಳಿ ಹಬ್ಬಗಳ ವೇಳೆಯಲ್ಲಿ ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ತರಲಿದೆ.
ಇದನ್ನೂ ಓದಿ : 2030ರೊಳಗೆ ಸುಜುಕಿ ಕಾರುಗಳು 100 ಕೆ.ಜಿ. ಹಗುರ ; ಸುರಕ್ಷತೆ ಕಡಿಮೆಯಾಗದಂತೆ ಹೊಸ ತಂತ್ರಜ್ಞಾನ!



















