ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮನೆಮದ್ದುಗಳು, ಜನಪ್ರಿಯ ಉತ್ಪನ್ನಗಳ ಪ್ರಚಾರ ಹಾಗೂ ‘ಮಕ್ಕಳಿಗೂ ಸುರಕ್ಷಿತ’ ಎಂಬ ಜಾಹೀರಾತುಗಳನ್ನು ನಂಬಿ ಶಿಶುಗಳ ಸೂಕ್ಷ್ಮ ತ್ವಚೆಯ ಮೇಲೆ ವಿವಿಧ ಉತ್ಪನ್ನಗಳನ್ನು ಪ್ರಯೋಗಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ಮಕ್ಕಳ ಆರೈಕೆಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಜಾಲತಾಣಗಳ ವೈರಲ್ ಪ್ರವೃತ್ತಿಗಳಿಗಿಂತ ವೈದ್ಯರ ಸಲಹೆ ಮತ್ತು ಉತ್ಪನ್ನದ ಘಟಕಗಳ ಕುರಿತು ಸಮಗ್ರ ಅರಿವಿಗೆ ಪೋಷಕರು ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ನಡೆದ ‘ಟ್ರಸ್ಟ್ ಬಿಫೋರ್ ಟ್ರೆಂಡ್ಸ್’ ಸಂವಾದದಲ್ಲಿ ತಜ್ಞರು ಈ ಕುರಿತು ಪೋಷಕರಿಗೆ ಹಲವು ಎಚ್ಚರಿಕೆಗಳನ್ನು ನೀಡಿದರು. ‘ಮಾಮ್‌ಜಂಕ್ಷನ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಹಾಗೂ ನಿಯೋನಾಟಾಲಜಿಸ್ಟ್ ಡಾ. ಸೈಯದ್ ಮುಜಾಹಿದ್, ಚರ್ಮರೋಗ ತಜ್ಞೆ ಡಾ. ರಮ್ಯಾ ನಾಗರಾಜ್ ಹಾಗೂ ಕೆ.ಟಿ. ಕಿಡ್ಸ್ ಸಂಸ್ಥೆಯ ಸಿಇಒ ಧ್ರುವ್ ಸಯಾನಿ ಸೇರಿದಂತೆ ತಜ್ಞರು ಮತ್ತು ನೂರಕ್ಕೂ ಹೆಚ್ಚು ‘ಮಾಮ್ ಕ್ರಿಯೇಟರ್’ಗಳು ಪಾಲ್ಗೊಂಡಿದ್ದರು.
ಆಕರ್ಷಕ ಜಾಹೀರಾತುಗಳಿಗೆ ಮರುಳಾಗದಿರಿ
ಉತ್ಪನ್ನಗಳ ಪ್ಯಾಕೆಟ್ ಮೇಲಿನ ‘ಚರ್ಮರೋಗ ತಜ್ಞರಿಂದ ಪರೀಕ್ಷಿತ’ ಅಥವಾ ‘ಮಕ್ಕಳ ತಜ್ಞರಿಂದ ಶಿಫಾರಸು’ ಎಂಬಂತಹ ಆಕರ್ಷಕ ಹೇಳಿಕೆಗಳನ್ನು ಮಾತ್ರ ಆಧರಿಸಿ ಉತ್ಪನ್ನಗಳನ್ನು ಆಯ್ಕೆ ಮಾಡಬಾರದು ಎಂದು ಡಾ. ಸೈಯದ್ ಮುಜಾಹಿದ್ ತಿಳಿಸಿದರು. ಉತ್ಪನ್ನದಲ್ಲಿರುವ ಕೃತಕ ಸುಗಂಧ, ಸಲ್ಫೇಟ್ ಸೇರಿದಂತೆ ವಿವಿಧ ಘಟಕಗಳ ಬಗ್ಗೆ ತಿಳಿದುಕೊಂಡು, ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆದು ಬಳಸಬೇಕು ಎಂದರು.
ಮಕ್ಕಳ ತ್ವಚೆಗೆ ಸರಳ ಆರೈಕೆಯೇ ಸೂಕ್ತ
ಮಕ್ಕಳ ತ್ವಚೆಯ ಆರೈಕೆಗೆ ಹಲವು ಹಂತಗಳ ಸೌಂದರ್ಯವರ್ಧಕ ಕ್ರಮಗಳ ಅಗತ್ಯವಿಲ್ಲ ಎಂದು ಡಾ. ರಮ್ಯಾ ನಾಗರಾಜ್ ಹೇಳಿದರು. “ಸರಳವಾದ ಆರೈಕೆಯೇ ಹೆಚ್ಚು ಪರಿಣಾಮಕಾರಿ” ಎಂಬ ನಿಲುವಿನೊಂದಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಪ್ರತಿಯೊಂದು ವಿಧಾನವನ್ನೂ ಮಕ್ಕಳ ಮೇಲೆ ಪ್ರಯೋಗಿಸುವುದನ್ನು ಪೋಷಕರು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗಾಗಿ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳು ತಮ್ಮ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಹೆಚ್ಚಿನ ಹೊಣೆಗಾರಿಕೆ ವಹಿಸಬೇಕು ಎಂದು ಧ್ರುವ್ ಸಯಾನಿ ಅಭಿಪ್ರಾಯಪಟ್ಟರು. ಇದೇ ವೇಳೆ, ಮಕ್ಕಳ ಆರೈಕೆ ಕುರಿತು ಮಾಹಿತಿ ಹಂಚಿಕೊಳ್ಳುವ ಸಾಮಾಜಿಕ ಜಾಲತಾಣದ ವಿಷಯ ಸೃಷ್ಟಿಕರ್ತರು ಪ್ರಚಾರಕ್ಕಿಂತ ಜವಾಬ್ದಾರಿಯುತ ಮಾಹಿತಿಗೆ ಆದ್ಯತೆ ನೀಡಬೇಕು ಹಾಗೂ ವಾಣಿಜ್ಯ ಸಹಭಾಗಿತ್ವದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ತಜ್ಞರು ಒತ್ತಿ ಹೇಳಿದರು. “ಪೋಷಕರಿಗೆ ಇಂದು ಮಾಹಿತಿಯ ಕೊರತೆಯಿಲ್ಲ; ಆದರೆ ವಿಶ್ವಾಸಾರ್ಹ ಮಾಹಿತಿಯನ್ನು ಗುರುತಿಸುವಲ್ಲಿ ಗೊಂದಲವಿದೆ. ಆ ಗೊಂದಲ ನಿವಾರಿಸುವುದು ಅಗತ್ಯ,” ಎಂದು ಮಾಮ್‌ಜಂಕ್ಷನ್ ಉಪಾಧ್ಯಕ್ಷೆ ನತಾಶಾ ಗರ್ಯಾಲಿ ಹೇಳಿದರು.
ಇದನ್ನೂ ಓದಿ : SIR ಸೇರಿ ಹಲವು ವಿಚಾರಗಳಲ್ಲಿ ಚುನಾವಣಾ ಆಯೋಗದೊಳಗೇ ಭುಗಿಲೆದ್ದ ಭಿನ್ನಮತ!



















