ಬೆಂಗಳೂರು : ಚಿನ್ನದ ಬೆಲೆ ಕಡಿಮೆ, ವೇಸ್ಟೇಜ್ ಕಡಿಮೆ ಎಂದು ಆಮಿಷ ಒಡ್ಡಿ ವ್ಯಕ್ತಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಜಾಲ ಬೆಂಗಳೂರಿನಲ್ಲಿ ಬಯಲಾಗಿದೆ.
ಹೌದು.. ಚಿನ್ನ ಖರೀದಿಗೆ ಹೋದವನಿಂದ ಕೋಟಿ ಕೋಟಿ ಹಣ ಪಡೆದು ಚಿನ್ನವನ್ನೂ ಕೊಡದೇ, ಹಣವೂ ಹಿಂತಿರುಗಿಸದೇ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದ್ರಚಂದ್ ಮಹಿಳೆಯ ಜೊತೆ ಸೇರಿ ಹಣ ಲಪಟಾಯಿಸಿರೋ ಘಟನೆ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ.
ಸರ್ಜಾಪುರ ಮೂಲದ ಪುನೀತ್ ಎಂಬ ವ್ಯಕ್ತಿ ವಂಚನೆಗೆ ಬಲಿಯಾಗಿ ಸುಮಾರು 2 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಮದುವೆಗಾಗಿ ಚಿನ್ನ ಖರೀದಿ ಮಾಡಲು ಮುಂದಾಗಿದ್ದ ಪುನೀತ್‌ಗೆ, ಸಂಬಂಧಿ ಸವಿತಾ ರೆಡ್ಡಿ ಕಡಿಮೆ ಬೆಲೆಯಲ್ಲಿ ಚಿನ್ನ ಸಿಗುತ್ತದೆ ಎಂದು ನಂಬಿಸಿ ಹೆಚ್‌ಎಸ್‌ಆರ್ ಲೇಔಟ್‌ನ ಎಂಪಿ ಜ್ಯುವೆಲ್ಲರ್ಸ್‌ಗೆ ಕರೆದುಕೊಂಡು ಹೋಗಿದ್ದಾಳೆ.
ಅಲ್ಲಿ ಮಾಲೀಕ ಇಂದ್ರಚಂದ್ ಜೊತೆ ಸೇರಿ ಚಿನ್ನದ ವ್ಯವಹಾರ ನಡೆಸಿ, ಮಾರ್ಚ್ 27 ರಂದು ಸುಮಾರು 2 ಕೋಟಿ ರೂಪಾಯಿ ಹಾರ್ಡ್ ಕ್ಯಾಶ್ ಪಡೆದಿದ್ದಾರೆ. ಆದರೆ “ನಾಳೆ ಬಂದು ಚಿನ್ನ ತೆಗೆದುಕೊಳ್ಳಿ” ಎಂದು ಹೇಳಿ ಬಳಿಕ ಇಂದ್ರಚಂದ್ ಹಾಗೂ ಸವಿತಾ ರೆಡ್ಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ನಂತರ ವಿಚಾರಿಸಿದಾಗ ಇಂದ್ರಚಂದ್ ಇದೇ ರೀತಿಯಲ್ಲಿ ಹಲವರನ್ನು ವಂಚಿಸಿದ್ದಾನೆ ಎಂಬುದು ತಿಳಿದುಬಂದಿದೆ. ಸವಿತಾ ರೆಡ್ಡಿ ಅಮಾಯಕರನ್ನು ಹುಡುಕಿ ಅಂಗಡಿಗೆ ಕರೆತಂದು ವಂಚನೆಗೆ ನೆರವಾಗುತ್ತಿದ್ದಳು ಎನ್ನಲಾಗಿದೆ.
ಈ ಕುರಿತು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಯನ್ನು ಬಂಧಿಸದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೋರ್ಟ್ ಜಾಮೀನು ನೀಡದೆ ಇದ್ದರೂ ಆರೋಪಿಯು ಅಂಗಡಿಯಲ್ಲಿ ರಾಜಾರೋಷವಾಗಿ ವ್ಯವಹಾರ ಮುಂದುವರೆಸುತ್ತಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರ ಕ್ರಮದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪಾರಿವಾಳದ ವಿಚಾರಕ್ಕೆ ಗಲಾಟೆ – ಚಾಕು ಇರಿದು ಯುವಕನ ಹತ್ಯೆ!


















