ಚಿಕ್ಕಬಳ್ಳಾಪುರ : ಜಿಲ್ಲೆಯ ತೌಡನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಹೆತ್ತ ತಾಯಿಯ ಮೇಲೆಯೇ ಪಾಪಿ ಮಗನೋರ್ವ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿ ಕಲ್ಲು ಹಾಗೂ ದೊಣ್ಣೆ ಹಿಡಿದು ತಾಯಿಯ ಮೇಲೆ ಮಗ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಅಂಜನಾದೇವಿ ಎಂಬ ವೃದ್ಧ ತಾಯಿ ತಮ್ಮ ನಾಲ್ವರು ಮಕ್ಕಳಿಗೆ ಈಗಾಗಲೇ ಆಸ್ತಿಯನ್ನು ಭಾಗ ಮಾಡಿಕೊಟ್ಟಿದ್ದು, ಒಂದು ಭಾಗವನ್ನು ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೂರನೇ ಮಗ ವಿಜಯ್ ಕುಮಾರ್, ಸೊಸೆ ಹಾಗೂ ಮೊಮ್ಮಕ್ಕಳು ಉಳಿದಿರುವ ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಂಜನಾದೇವಿ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಲ್ಲು ಮತ್ತು ದೊಣ್ಣೆಗಳಿಂದ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ವೃದ್ಧೆ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ನಂದಿ ಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕುಟುಂಬದ ಆಸ್ತಿ ವಿವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ : ಪೊಲೀಸ್ ಠಾಣೆಯಲ್ಲೇ ASI ಬರ್ತ್‌ಡೇ ಸೆಲೆಬ್ರೇಷನ್ – ನೆಟ್ಟಿಗರ ಆಕ್ರೋಶ!



















