ಬೆಂಗಳೂರು : ಐಪಿಎಲ್ 2026ರ ಸೀಸನ್ ಮುಕ್ತಾಯದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ನಾಯಕತ್ವದಿಂದ ರಿಷಭ್ ಪಂತ್ ದಿಢೀರ್ ಕೆಳಗಿಳಿದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಟೂರ್ನಿಯಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಲಕ್ನೋ ತಂಡದ ಈ ಬೆಳವಣಿಗೆಯ ಕುರಿತು ಭಾರತದ ಮಾಜಿ ನಾಯಕ ಹಾಗೂ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
27 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ತಂಡ ಸೇರಿದ್ದ ಪಂತ್, ನಾಯಕನಾಗಿ ಹಾಗೂ ಬ್ಯಾಟರ್ ಆಗಿ ವಿಫಲರಾಗಿದ್ದರೂ, ಅವರ ಈ ನಿರ್ಧಾರದ ಹಿಂದೆ ಫ್ರಾಂಚೈಸಿಯ ಒಳಗಿನ ಗೊಂದಲಗಳೇ ಪ್ರಮುಖ ಕಾರಣ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ನಾಯಕತ್ವದ ಜವಾಬ್ದಾರಿಯಿಂದ ಮುಕ್ತರಾಗಲು ಪಂತ್ ಸ್ವತಃ ಮನವಿ ಮಾಡಿದ್ದನ್ನು ಫ್ರಾಂಚೈಸಿ ಒಪ್ಪಿಕೊಂಡಿರುವುದು ಮುಂಬರುವ ದಿನಗಳಲ್ಲಿ ತಂಡದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿದೆ.
ಲಕ್ನೋ ಮ್ಯಾನೇಜ್‌ಮೆಂಟ್ ವಿರುದ್ಧ ಗವಾಸ್ಕರ್ ಆಕ್ರೋಶ
ಸ್ಪೋರ್ಟ್ಸ್‌ಸ್ಟಾರ್ ಪತ್ರಿಕೆಗೆ ಬರೆದಿರುವ ತಮ್ಮ ಇತ್ತೀಚಿನ ಅಂಕಣದಲ್ಲಿ ಸುನಿಲ್ ಗವಾಸ್ಕರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚಿಂಗ್ ಸಿಬ್ಬಂದಿಯ ಅತಿಯಾದ ಹಸ್ತಕ್ಷೇಪವನ್ನು ಕಠಿಣ ಶಬ್ದಗಳಿಂದ ಟೀಕಿಸಿದ್ದಾರೆ. ಜಸ್ಟಿನ್ ಲ್ಯಾಂಗರ್, ಟಾಮ್ ಮೂಡಿ, ಭರತ್ ಅರುಣ್, ಲ್ಯಾನ್ಸ್ ಕ್ಲೂಸ್ನರ್ ಮತ್ತು ಕೇನ್ ವಿಲಿಯಮ್ಸನ್ ಅವರಂತಹ ಘಟಾನುಘಟಿ ಹೆಸರುಗಳು ಲಕ್ನೋ ತಂಡದ ಸಪೋರ್ಟ್ ಸ್ಟಾಫ್‌ನಲ್ಲಿದ್ದಾರೆ.
ಆದರೆ, ತಂಡದಲ್ಲಿ ವಿಪರೀತ ಸಲಹೆಗಾರರು ಇದ್ದಿದ್ದರಿಂದಲೇ ರಿಷಭ್ ಪಂತ್ ತಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು ಎಂಬುದನ್ನು ಗವಾಸ್ಕರ್ ಎತ್ತಿ ತೋರಿಸಿದ್ದಾರೆ. ಪಂತ್ ಅವರ ಕಿವಿಯಲ್ಲಿ ಸದಾ ಬೇರೆ ಬೇರೆ ಆಲೋಚನೆಗಳು ಹಾಗೂ ವಿಭಿನ್ನ ಧ್ವನಿಗಳು ಕೇಳಿಸುತ್ತಿದ್ದವು ಎಂಬ ಅವರದ್ದೇ ಹೇಳಿಕೆಯನ್ನು ಉಲ್ಲೇಖಿಸಿರುವ ಗವಾಸ್ಕರ್, ಕೇವಲ ಪತ್ರಿಕೆಗಳ ಹೆಡ್‌ಲೈನ್ಸ್‌ಗಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಡುವ ಕೋಚ್‌ಗಳಿಗೆ ಕ್ರಿಕೆಟ್ ಸೂಕ್ತ ಪಾಠ ಕಲಿಸಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಆರ್ಸಿಬಿ ಕೋಚ್ ಆಂಡಿ ಫ್ಲವರ್ ಸೂತ್ರಕ್ಕೆ ಗಾವಾಸ್ಕರ್ ಜೈಕಾರ
ಇದೇ ವೇಳೆ, ಸತತ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಮುಖ್ಯ ಕೋಚ್ ಆಂಡಿ ಫ್ಲವರ್ ಅವರ ಕಾರ್ಯವೈಖರಿಯನ್ನು 1983ರ ವಿಶ್ವಕಪ್ ವಿಜೇತ ಆಟಗಾರ ಸುನಿಲ್ ಗವಾಸ್ಕರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯಾವುದೇ ದೊಡ್ಡ ಪ್ರಚಾರ ಅಥವಾ ಅನಗತ್ಯ ಹೇಳಿಕೆಗಳನ್ನು ನೀಡದೆ ತೆರೆಮರೆಯಲ್ಲಿ ಶಾಂತವಾಗಿ ಕೆಲಸ ಮಾಡುವ ಆಂಡಿ ಫ್ಲವರ್ ಅವರ ಗುಣವನ್ನು ಇತರ ತಂಡಗಳ ಕೋಚ್‌ಗಳು ಕಲಿಯಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ. ಆಟಗಾರರಿಗೆ ಯಾವುದೇ ಗೊಂದಲವಿಲ್ಲದೆ ಮುಕ್ತವಾಗಿ ಆಡಲು ಬಿಡುವ ಆಂಡಿ ಫ್ಲವರ್ ಅವರ ಸರಳ ಸೂತ್ರವೇ ಆರ್ಸಿಬಿ ತಂಡದ ಬ್ಯಾಕ್-ಟು-ಬ್ಯಾಕ್ ಐಪಿಎಲ್ ಟ್ರೋಫಿ ಸಾಧನೆಗೆ ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಫ್ರಾಂಚೈಸಿಗಳಿಗೆ ಗವಾಸ್ಕರ್ ನೀಡಿದ ಮಹತ್ವದ ಪಾಠ
ತಮ್ಮ ಅಂಕಣದ ಕೊನೆಯಲ್ಲಿ ಐಪಿಎಲ್ ಫ್ರಾಂಚೈಸಿಗಳ ಮಾಲೀಕರಿಗೆ ಸುನಿಲ್ ಗವಾಸ್ಕರ್ ಒಂದು ಪ್ರಮುಖ ಸಂದೇಶ ರವಾನಿಸಿದ್ದಾರೆ. ಕೋಚ್‌ಗಳನ್ನು ನೇಮಕ ಮಾಡುವಾಗ ಕೇವಲ ದೊಡ್ಡ ಹೆಸರುಗಳನ್ನು ನೋಡಿ ಮಾರುಹೋಗಬಾರದು, ಬದಲಿಗೆ ಆಂಡಿ ಫ್ಲವರ್ ಅವರಂತಹ ಶಿಸ್ತಿನ ಮತ್ತು ಜವಾಬ್ದಾರಿಯುತ ವ್ಯಕ್ತಿಗಳನ್ನು ಗುರುತಿಸಬೇಕು ಎಂದಿದ್ದಾರೆ. ಫ್ಲವರ್ ಅವರ ಸಪೋರ್ಟ್ ಸ್ಟಾಫ್‌ನಲ್ಲಿ ಕೇವಲ ಮದ್ಯ ಕುಡಿಯುವ ಅಥವಾ ಗಾಲ್ಫ್ ಆಡುವ ಸ್ನೇಹಿತರ ದಂಡು ಇರುವುದಿಲ್ಲ, ಬದಲಿಗೆ ಕ್ರಿಕೆಟ್ ಕಡೆಗೆ ಮಾತ್ರ ಗಮನ ಹರಿಸುವ ವೃತ್ತಿಪರರು ಇರುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ. ಇದನ್ನು ಐಪಿಎಲ್‌ನ ಇತರ ತಂಡಗಳು ಅರ್ಥ ಮಾಡಿಕೊಳ್ಳದಿದ್ದರೆ, ಮುಂದಿನ ಸೀಸನ್‌ಗಳಲ್ಲೂ ಟೂರ್ನಿ ಆರಂಭವಾದ ಮೊದಲ ತಿಂಗಳಿನಲ್ಲೇ ಆ ತಂಡಗಳು ಪ್ರಶಸ್ತಿ ರೇಸ್‌ನಿಂದ ಹೊರಬೀಳಲಿವೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂಟಕವಾಗ್ತಿರುವ ಫ್ರಾಂಚೈಸಿ ಲೀಗ್‌ಗಳಿಗೆ ಲಗಾಮು – ಮಹತ್ವದ ಸಮಿತಿ ರಚನೆ!



















